ದೆಹಲಿಯಲ್ಲಲ್ಲ, ಬೆಂಗಳೂರಿನಲ್ಲೇ ಷಾ ಭೇಟಿ: ಸಿಎಂ ಬೊಮ್ಮಾಯಿ‌ ಹೇಳಿಕೆ

CM Bommai
Published on

ಬೆಂಗಳೂರು: ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ದೆಹಲಿಗೆ ಹೋಗುತ್ತಿದ್ದೇನೆ. ಆದರೆ ಪಕ್ಷದ ವರಿಷ್ಠರು ಅಥವಾ ಕೇಂದ್ರ ಸಚಿವರನ್ನು ಭೇಟಿ ಮಾಡುವ ಯಾವುದೇ ಇರಾದೆಯಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮೇ 3ರಂದು ಬೆಂಗಳೂರಿಗೆ ಬರುವ ಸಾಧ್ಯತೆಗಳಿದ್ದು, ಅದೇ ದಿನ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚಿಸಬೇಕೆಂದಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ಶನಿವಾರ ಆಯೋಜಿಸಿರುವ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಭಾಗವಹಿಸಲು ಇಂದು ರಾತ್ರಿ ದೆಹಲಿಗೆ ಹೊರಟಿರುವೆ.

ಶನಿವಾರದ ಸಮಾವೇಶದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳುವೆ. ಭಾನುವಾರ ಬೆಳಗ್ಗೆ ವಿಮಾನ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದು, ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ಸಚಿವ ಸಂಪುಟದಲ್ಲಿ ಖಾಲಿಯಿರುವ ಐದು ಸ್ಥಾನಗಳನ್ನು ಭರ್ತಿ ಮಾಡಿ, ಒಂದು ವರ್ಷದಮಟ್ಟಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂಬ ಆಕಾಂಕ್ಷೆಗಳು, ಹಲವು ಶಾಸಕರು ಹಾಗೂ ಮುಖಂಡರ ಅಭಿಪ್ರಾಯಗಳನ್ನು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿರುವೆ ಎಂದು ಸಿಎಂ ಬೊಮ್ಮಾಯಿ‌ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net