ಮಂಡ್ಯದ ಮಟನ್ ಶಾಪ್ ಅಭಿಮಾನಿಯ ಬಗ್ಗೆ ಬೋಲ್ಡ್​ ಬ್ಯೂಟಿ ಸನ್ನಿ ಲಿಯೋನ್ ಹೇಳಿದ್ದು ಹೀಗೆ...

Sunny Leone
Published on

ಬೆಂಗಳೂರು: ಮಾಜಿ ನೀಲಿ ಸಿನಿಮಾ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಅವರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್​ ನೀಡುವ ಮೂಲಕ ಈ ಹಿಂದೆ ಗಮನ ಸೆಳೆದಿದ್ದ. ಚಿಕನ್ ಅಥವಾ ಮಟನ್​​ ಖರೀದಿಸುವ ಅಭಿಮಾನಿಗಳಿಗೆ ರಿಯಾಯಿತಿ ಕೊಡುವುದಾಗಿ ಆಫರ್​ ನೀಡಿದ್ದ. ಈ ವಿಚಾರ ಸನ್ನಿ ಲಿಯೋನ್​ ಗಮನಕ್ಕೆ ಬಂದಿದ್ದು, ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ...

ಚಾಂಪಿಯನ್​ ಹೆಸರಿನ ಕನ್ನಡ ಸಿನಿಮಾದ ಆಡಿಯೋ ಲಾಂಚ್​​ಗಾಗಿ ನಿನ್ನೆ ಸನ್ನಿ ಲಿಯೋನ್​ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಆ ಪ್ರಶ್ನೆಗಳಲ್ಲಿ ಮಂಡ್ಯ ಅಭಿಮಾನಿಯ ಬಗ್ಗೆಯೂ ಕೇಳಲಾಯಿತು.

ಮಂಡ್ಯದಲ್ಲಿ ನಿಮ್ಮ ಅಭಿಮಾನಿಯೊಬ್ಬ ವಿಶೇಷ ಅಭಿಮಾನ ಮೆರೆದಿದ್ದಾರೆ. ತನ್ನ ಚಿಕನ್​ ಶಾಪ್​ನಲ್ಲಿ ನಿಮ್ಮ ಫೋಟೋ ತೋರಿಸಿ ಮಟನ್​ ಅಥವಾ ಚಿಕನ್​ ಖರೀದಿ ಮಾಡಿದರೆ ರಿಯಾಯಿತಿ ಕೊಡುತ್ತಿದ್ದಾರೆ. ಇದರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಅಭಿಮಾನದ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರ ನೀಡಿದ ಸನ್ನಿ ಲಿಯೋನ್​, ಆ ಅಂಗಡಿ ಬಗ್ಗೆ ನಾನು ಕೇಳಿದ್ದಿನಿ ಬಹಳ ಖುಷಿ ಆಯ್ತು. ಮೊದಲನೆಯದಾಗಿ ನಾನು ಸಸ್ಯಹಾರಿ. ಪ್ರಾಣಿಗಳನ್ನು ಕೊಲ್ಲುವುದರಲ್ಲಿ ನನಗೆ ನಂಬಿಕೆಯಿಲ್ಲ. ಆದರೂ, ಅವರು ಪ್ರೀತಿ ಅಥವಾ ಅಭಿಮಾನ ತೋರುವ ರೀತಿ ಅದಾಗಿದೆ. ಅವ್ರ ಪ್ರೀತಿಗೆ ಏನ್ ಹೇಳಬೇಕು ಗೊತ್ತಾಗ್ತಿಲ್ಲ ಎಂದು ಹೇಳಿದರು.

ಅಂದಹಾಗೆ ಚಾಂಪಿಯನ್ ಸಿನಿಮಾದ ಸ್ಪೆಷಲ್ ಹಾಡಿಗೆ ಸನ್ನಿ ಲಿಯೋನ್​ ಹೆಜ್ಜೆ ಹಾಕಿದ್ದಾರೆ. ಆ ಸ್ಪೆಷಲ್​ ಹಾಡು ಡಿಂಗರ್ ಬಿಲ್ಲಿ ಎಂಬ ಕ್ಯಾಚಿ ಲೈನ್​ ಹೊಂದಿದೆ. ಈಗಾಗಲೇ ಸೇಸಮ್ಮ ಹಾಡು ಹಾಗು ಲವ್ ಯು ಆಲಿಯಾ ಹಾಡುಗಳಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಚಾಂಪಿಯನ್​ ಚಿತ್ರದಲ್ಲಿ ಸಚಿನ್ ಧನಪಾಲ್ ನಾಯಕರಾಗಿದ್ದು, ಸಾಹುರಾಜ್ ಶಿಂಡೇ ನಿರ್ದೇಶನ ಮಾಡಿದ್ದಾರೆ.

ಇನ್ನು ಮಂಡ್ಯ ಅಭಿಮಾನಿಯ ವಿಚಾರಕ್ಕೆ ಬರುವುದಾರೆ, ಮಂಡ್ಯ ನಗರದ ಕರ್ನಾಟಕ ಬಾರ್​ ವೃತ್ತದಲ್ಲಿ ಚಿಕನ್​ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್​ ಅಭಿಮಾನಿ ಪ್ರಸಾದ್​, ತನ್ನ ಅಂಗಡಿಯಲ್ಲಿ ಚಿಕನ್​ ಖರೀದಿಸುವ ಸನ್ನಿ ಲಿಯೋನ್​ ಅಭಿಮಾನಿಗಳಿಗೆ ಶೇ.10 ಡಿಸ್ಕೌಂಟ್​ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ, ಬದಲಿಗೆ ಮೂರು ಪ್ರಮುಖ ಷರತ್ತು ಪೂರೈಸಬೇಕು.

ಸಾಮಾಜಿಕ ಜಾಲತಾಣ ಫೆಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್​ ಅವರನ್ನು ಫಾಲೋ ಮಾಡುತ್ತಿರಬೇಕು, ತಮ್ಮ ಮೊಬೈಲ್​ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು, ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್​ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್​ ನೀಡಲಾಗುತ್ತದೆ. ಈ ಫಲಕ ಸಿಕ್ಕಾಪಟ್ಟೆ ವೈರಲ್​ ಆಗಿ, ಸನ್ನಿ ಗಮನಕ್ಕೂ ಬಂದಿದ್ದು, ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net