

ರಾಮನಗರ : ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಐಜೂರು ಸರ್ಕಲ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು-ಮೈಸೂರು ರಸ್ತೆ ಐಜೂರು ಸರ್ಕಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಬಳಸದೆ ಸೌದೆ ಒಲೆ ಮುಖಾಂತರ ಅಡುಗೆ ಮಾಡುತ್ತೇವೆ ಎಂಬ ಅಣಕು ಪ್ರದರ್ಶನ ನಡೆಸಿ ವಿನೂತನ ರೀತಿಯಲ್ಲಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ವಿ. ಚಂದ್ರಸಾಗರ್ ಮಾತನಾಡಿ, ಬಿಜೆಪಿಗರು ಬೇರೆ ಪಕ್ಷದವರನ್ನು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾರೆ. ಜನವಿರೋಧಿ ನೀತಿ ಅನುಸರಣೆ ಬಿಜೆಪಿಯದ್ದಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಗ್ಯಾಸ್ ಬೆಲೆಯನ್ನು ದಿಢೀರ್ ಒಂದೇ ಸಲ 50 ರೂ. ಹೆಚ್ಚಳ ಮಾಡಿದೆ. ಬೆಲೆ ಹೆಚ್ಚಳ ಪರಿಣಾಮ ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಸಮಸ್ಯೆ ಆಗುತ್ತದೆ. ರಾಜ್ಯ ಸರ್ಕಾರ ಏನೇ ಮಾಡಿದರೂ ಜನರ ಒಳಿತಿಗಾಗಿ ಮಾಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆ ಲಾಭವನ್ನು ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ವರ್ಗಾಯಿಸಬೇಕಿತ್ತು. ಆದರೆ, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿ, ಜನರನ್ನು ವಂಚಿಸಿದೆ ಎಂದು ದೂರಿ ಆಕ್ರೋಶ ಹೊರಹಾಕಿದರು.
ಕಚ್ಚಾತೈಲದ ಬೆಲೆ ಕುಸಿತದ ಕಾರಣದಿಂದ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2 ಇಳಿಕೆಯಾಗಿದೆ. ಈ ಬೆಲೆ ಕುಸಿತದ ಲಾಭವನ್ನು ಜನ ಸಾಮಾನ್ಯರಿಗೆ ವರ್ಗಾಯಿಸಲು ಮೋದಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಎರಡೂ ಇಂಧನಗಳ ಮೇಲೆ 2ರಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ ಎಂದು ದೂರಿದರು.
ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವೆಂಕಟೇಶ್ ಮಾತನಾಡಿ, ಮೋದಿ ಅವರು ತಮ್ಮ ಸರ್ಕಾರದ ಆದಾಯ ಸಂಗ್ರಹಕ್ಕಷ್ಟೇ ಆದ್ಯತೆ ನೀಡುತ್ತಾರೆ. ಹಲವು ವರ್ಷಗಳಿಂದ ಹೀಗೇ ಮಾಡುತ್ತಿದ್ದು, ಕಚ್ಚಾತೈಲ ಬೆಲೆ ಇಳಿಕೆ ಲಾಭವು ಜನ ಸಾಮಾನ್ಯರಿಗೆ ಸಿಗದಂತೆ ಮಾಡಿದ್ದಾರೆ. ಅವರ ವಿಫಲ ಆರ್ಥಿಕ ನೀತಿಗಳ ಕಾರಣದಿಂದ ದೇಶದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚಾಗಿದೆ. ಎಲ್ಲ ಬೆಲೆಏರಿಕೆಗಳ ನಡುವೆ ಈಗ ಎಲ್‌ಪಿಜಿ ಸಿಲಿಂಡರ್ ಬೆಲೆ ಸಹ ಹೆಚ್ಚಳ ಮಾಡಿ, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾದ್ಯಕ್ಷ ಜನಾರ್ಧನ್, ಮುಖಂಡರಾದ ಸುಜಯ್‌ಕುಮಾರ್, ಕೆಂಪರಾಜು, ವಿನಯ್‌ಕುಮಾರ್, ದೀಪುಗೌಡ, ಎಂ. ಮುಶೀರ್, ಶಿವಕುಮಾರ್, ಅನಿಲ್, ನಾಗೇಶ್, ಅನಿಲ್‌ಕುಮಾರ್, ವಾಸಿಂ ಅಕ್ರಮ್ ಮುಂತಾದವರಿದ್ದರು.