

ಗಂಗಾಧರ್ ಬೈರಾಪಟ್ಟಣ ರಾಮನಗರ
ನೀರಾ ಹೋರಾಟದ ತವರು ರಾಮನಗರ ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ನೀರಾ ಇಳಿಸಲು ಮತ್ತೊಮ್ಮೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಕಳೆದ ಎರಡು ದಶಕದ ಹಿಂದೆ ಆರಂಭಗೊಂಡ ನೀರಾ ಚಳವಳಿಗೆ ಉಗ್ರ ರೂಪ ನೀಡಿ, ಇಬ್ಬರು ರೈತರು ಪ್ರಾಣಾರ್ಪಣೆ ಮಾಡಿದ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಾ ಇಳಿಸಲು ಅನುಮತಿ ನೀಡುವಂತೆ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಇದಕ್ಕೆ ಯಾರೂ ಸ್ಪಂದಿಸಿರಲಿಲ್ಲ.
ಇದೀಗ ಮತ್ತೆ ರೈತ ಉತ್ಪಾದಕ ಕಂಪನಿ ಮೂಲಕ ನೀರಾ ಇಳಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ರೈತರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ರೈತ ಉತ್ಪಾದಕ ಕಂಪನಿ (ಎಫ್‌ಪಿಒ) ಸ್ಥಾಪನೆ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ರೈತರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಇದರಲ್ಲಿ ನೀರಾ ಇಳಿಸಲು ಆಸಕ್ತಿ ಇರುವ ರೈತರ ಗುಂಪನ್ನು ಮಾಡಿ, ನೀರಾ ಇಳಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ನೀರಾ ಇಳಿಸಲು ಆಸಕ್ತಿ ಇರುವ ರೈತರ 2 ಗುಂಪುಗಳು (ಎಫ್‌ಐಜಿ) ಸಿದ್ಧಗೊಂಡಿವೆ. ಪ್ರತಿ ಗುಂಪಿನಲ್ಲಿ 15-25ರ ಸಂಖ್ಯೆಯಲ್ಲಿ ರೈತರು ಇರಲಿದ್ದಾರೆ. ಗುಂಪಿನ ಪ್ರತಿ ಸದಸ್ಯ ತನ್ನ ತೋಟದ ಉತ್ತಮ ಇಳುವರಿ ಇರುವ 10 ತೆಂಗಿನ ಮರಗಳಲ್ಲಿ ನೀರಾ ಇಳಿಸಿ, ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಮಾರಾಟ ಮಾಡಬಹುದಾಗಿದೆ.
ನೀರಾ ಇಳಿಸಲು ಹೋರಾಟ ಆರಂಭವಾದ ದಿನದಿಂದಲೂ ಜಿಲ್ಲೆಯಲ್ಲಿ ಇದಕ್ಕೆ ಕಾನೂನಿನ ಮಾನ್ಯತೆ ಕೊಡಿಸಲು ಹಲವಾರು ಬಾರಿ ಪ್ರಯತ್ನಗಳು ನಡೆದಿವೆ. ಇದೀಗ ಮುಂದುವರಿದ ಭಾಗವಾಗಿ ಜಿಲ್ಲೆಯ ಎ್ಪಿಒ ಜಿಲ್ಲಾಡಳಿತಕ್ಕೆ ನೀರಾ ಇಳಿಸಿ ಮಾರಾಟ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಇಷ್ಟೇ ಅಲ್ಲದೆ, ತೋಟಗಾರಿಕೆ ಇಲಾಖೆ, ಅಬಕಾರಿ ಇಲಾಖೆಗೂ ಮನವಿ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಕಾನೂನು ಮೀರಿ ನೀರಾ ಇಳಿಸುವ ಪ್ರಯತ್ನ ನಡೆಸುವುದಿಲ್ಲ ಎನ್ನುವ ಎ್ಪಿಒ ಇದಕ್ಕಾಗಿ ಮತ್ತಷ್ಟು ಹೋರಾಟ ಮಾಡಲು ಸಿದ್ಧವಿದೆ.
ಈಗಾಗಲೇ ಜಿಲ್ಲೆಯ ರೈತರ ತಂಡ ಹಲವಾರು ಕಡೆ ಭೇಟಿ ನೀಡಿ, ನೀರಾ ಸಂಸ್ಕರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆಯ ವೀರಭದ್ರಯ್ಯ ಎನ್ನುವರು ಸಹ ನೀರಾ ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿದ್ದಾರೆ. ಇವರ ಬಳಿಯೂ ಮಾಹಿತಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ನೀರಾ ಇಳಿಸಿ, ಮಾರಾಟ ಮಾಡುವ ಸಂಬಂಧ ಡಿಪಿಆರ್ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಿದರೆ ಇದನ್ನು ಸರ್ಕಾರಕ್ಕೆ ಕಳಿಸಿ ಅನುಮತಿ ಪಡೆಯುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡಲಿದೆ.
ನೀರಾ ಇಳಿಸಿದ ನಂತರ ಸುಮಾರು 6 ತಿಂಗಳ ಕಾಲ ಕೆಡದಂತೆ ಇಡಲು ಅನುಕೂಲವಾಗುವ ತಂತ್ರಜ್ಞಾನವನ್ನು ಬಳಕೆ ಮಾಡಲು ಎ್ಪಿಒ ಮುಂದಾಗಿದೆ. ಇದಕ್ಕೆ ಕೇರಳದ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರದಿಂದ ತಂತ್ರಜ್ಞಾನದ ನೆರವನ್ನು ಪಡೆದುಕೊಳ್ಳಲಿದೆ. ಇದರ ಪ್ರಕಾರ ನೀರಾವನ್ನು ಹೊಂಬಾಳೆಯಿಂದ ಪಡೆಯುವ ವೇಳೆಯಲ್ಲಿಯೇ ಮಡಕೆ ಬದಲಿಗೆ ಥರ್ಮಾಕೋಲ್ ಡಬ್ಬದಲ್ಲಿ ಮಂಜುಗಡ್ಡೆಯನ್ನು ಇಟ್ಟು, ಸುಧಾರಿತ ಕವರ್‌ನಲ್ಲಿ ನೀರಾವನ್ನು ಸಂಗ್ರಹಿಸಿ, ನಂತರ ಮೈನಸ್ 5 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ನೀರಾವನ್ನು ಸಂಸ್ಕರಣೆ ಮಾಡಬಹುದಾಗಿದೆ. ಇದು ಹೆಚ್ಚು ದಿನ ಬಾಳಿಕೆ ಬರಲಿದೆ. ಒಂದು ವೇಳೆ ಬಳಕೆ ಆಗದೆ ಉಳಿದರೆ ಅದನ್ನು ಬೆಲ್ಲ ಸೇರಿ ಇತರ ಉತ್ಪನ್ನಗಳ ತಯಾರಿಕೆಗೂ ಬಳಕೆ ಮಾಡಿಕೊಳ್ಳಬಹುದಾಗಿದೆ.
ಎರಡು ದಶಕದ ಹಿಂದೆ ಹುಟ್ಟಿಕೊಂಡ ನೀರಾ ಹೋರಾಟ ಜೀವ ಕಳೆದುಕೊಳ್ಳದೆ ರೈತರ ಮತ್ತು ಹೋರಾಟಗಾರರ ಪರಿಶ್ರಮದ ಫಲವಾಗಿ ನಿರಂತವಾಗಿ ನಡೆಯುತ್ತಲೇ ಬಂತು. ಇದರ ಪರಿಣಾಮ, ರಾಜ್ಯ ಸರ್ಕಾರ 2017-18ನೇ ಸಾಲಿನಲ್ಲಿ ನೀರಾವನ್ನು ಒಂದು ಪುಷ್ಟಿದಾಯಕ ಪೇಯವಾಗಿ ಬಳಸಲು ಅನುಮತಿ ನೀಡಿತು. ಜತೆಗೆ ಸುಮಾರು 3 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿತ್ತು.
ರಾಜ್ಯದಲ್ಲಿ ನೀರಾ ಇಳಿಸಲು ಅನುಕೂಲವಾಗುವಂತೆ ನೀರಾ ನೀತಿಯನ್ನು ಜಾರಿಗೆ ತರುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿ, ಅಬಕಾರಿ ನಿಯಮಗಳಲ್ಲಿ ಕೆಲವು ಮಾರ್ಪಾಡು ಮಾಡುವುದಾಗಿಯೂ ಹೇಳಿತ್ತು. ಜತೆಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಾ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ ಈ ಮಾರ್ಗಸೂಚಿ ಜಿಲ್ಲಾ ತೋಟಗಾರಿಕೆ ಇಲಾಖೆಗೆ ಬಂದಿದೆಯಾದರೂ, ನೀರಾ ಘಟಕಗಳ ಸ್ಥಾಪನೆಗೆ ಬೇಕಾದ ಅನುದಾನ ಬಂದಿಲ್ಲ.
2017ರ ಡಿಸೆಂಬರ್‌ನಲ್ಲಿ ರಾಜ್ಯ ತೋಟಗಾರಿಕೆ ಆಯುಕ್ತರು ರಾಜ್ಯ ವಲಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಘಟಕ ಸ್ಥಾಪನೆಗೆ ಮಾರ್ಗಸೂಚಿ ಹೊರಡಿಸಿದ್ದರು. ಅದರಂತೆ ತೆಂಗು ಅಭಿವೃದ್ಧಿ ಮಂಡಳಿಯಿಂದ ರಚನೆಯಾದ ನೋಂದಾಯಿತ ಬೆಳಗಾರರ ಕಂಪನಿಗಳು ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರಚಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ನೀರಾ ಇಳಿಸಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಬೇಕು.
ಇದಕ್ಕಾಗಿ ಅಬಕಾರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಸೇರಿ ಹಲವು ನಿಬಂಧನೆಗಳನ್ನು ವಿಧಿಸಿತ್ತು. ವಿವಿಧ ಹಂತಗಳಲ್ಲಿ ಗರಿಷ್ಠ 25ರಿಂದ 50 ಲಕ್ಷ ರೂ.ವರೆಗೂ ಸಹಾಯಧನ ಮತ್ತು ಉತ್ಪನ್ನಗಳ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು 10 ಲಕ್ಷ ರೂ.ವರೆಗೂ ಸರ್ಕಾರ ಸಹಾಯಧನ ನೀಡುತ್ತದೆ. ಹೀಗೆ ಹಲವು ಮಾರ್ಗಸೂಚಿಗಳುಳ್ಳ ಆದೇಶ ಬಂದು ಹಲವಾರು ವರ್ಷಗಳೇ ಕಳೆದರೂ ನೀರಾ ಘಟಕ ಆರಂಭಕ್ಕೆ ಯಾರೂ ಮುಂದೆ ಬಂದಿರಲಿಲ್ಲ.
ನೀರಾ ಇಳಿಸಲು ಅನುಮತಿ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕಾಗಿ ಹಲವಾರು ಕಡೆ ತೆರಳಿ ಅಧ್ಯಯನ ನಡೆಸಲಾಗಿದ್ದು, ಕಾನೂನುಬದ್ಧವಾಗಿ ನೀರಾ ಇಳಿಸಿ ಮಾರಾಟ ಮಾಡಲಾಗುವುದು.
ಧರಣೇಶ್ ರಾಂಪುರ, ಎಫ್ಪಿಓ ನಿರ್ದೇಶಕ
----
ಪ್ರಪಂಚದಲ್ಲಿಯೇ ನೈಸರ್ಗಿಕವಾಗಿ ದೊರಕುವ ಆರೋಗ್ಯಕರ ಪಾನೀಯ ಎಂದರೆ ನೀರಾ. ಇದನ್ನು ಇಳಿಸಿ ಮಾರಾಟ ಮಾಡಲು ಅನುಮತಿಗಾಗಿ ಕೋರಲಾಗಿದೆ. ಇದಕ್ಕೆ ಕಾಸರಗೋಡಿನ ಸಿಪಿಸಿಆರ್‌ಐ ನೆರವು ಪಡೆಯಲಾಗುವುದು. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ನಾವಿದ್ದೇವೆ.
ಸಿ.ಪುಟ್ಟಸ್ವಾಮಿ, ಎಫ್ಪಿಓ ನಿರ್ದೇಶಕ
-