ಕಿತ್ತೂರು ರಾಣಿ ಚನ್ನಮ್ಮ ಶೌರ್ಯಕ್ಕೆ ಹೆಸರು

ಕಿತ್ತೂರು ರಾಣಿ ಚನ್ನಮ್ಮ ಶೌರ್ಯಕ್ಕೆ ಹೆಸರು
Published on

ಹಾಸನ: ಮಹಿಳಾ ಸಬಲೀಕರಣದ ಸರ್ವೋತ್ತಮ ಉದಾಹರಣೆ ಹಾಗೂ ಶೌರ್ಯಕ್ಕೆ ಮೊದಲನೇ ಸ್ಥಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಇದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿ.ಮಂಜುನಾಥ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಣಿ ಚನ್ನಮ್ಮ ಅವರಿಂದ ಕಲಿಯಲೇಬೇಕಾದ ವಿಷಯಗಳೆಂದರೆ ಭಾರತೀಯ ಪರಂಪರೆಯಲ್ಲಿ ನಾರಿಯ ಸಶಕ್ತೀಕರಣದ ವಿಶೇಷ ಸೌಭಾಗ್ಯ, ಹೆಣ್ಣು ಮಕ್ಕಳ ಶಿಕ್ಷಣ, ನಮ್ಮ ಒಗ್ಗಟ್ಟು, ಸಂಸ್ಕಾರ, ದೇಭಕ್ತಿ ಎಂದು ಹೇಳಿದರು.

ಈ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಹೆಣ್ಣು ಮಕ್ಕಳು ಬಹಳ ವಿರಳವಾಗಿ ಕಾಣುತ್ತಿದ್ದರು. ಇದಕ್ಕೆ ಕಾರಣ ಶಿಕ್ಷಣ ಮತ್ತು ಹೆಣ್ಣಿಗೆ ಎಲ್ಲಿಯೂ ಮುಕ್ತ ಅವಕಾಶಗಳನ್ನು ಸಿಗದಿರುವುದು. ಆದರೆ ಇಂದು ಆದಾಯದ ಉದ್ದೇಶದಿಂದ ಅಂಜಿಕೆಯಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಸೈನಿಕರಾಗಿ ದೇಶಕ್ಕಾಗಿ ಸೇವೆ ಸಲ್ಲಿಸಲು ಕಳುಹಿಸುವವರು ಬಹಳ ಕಡಿಮೆ. ಹಾಗಾಗಿ ದೇಶ ಸೇವೆಗಾಗಿ ಧೈರ್ಯ, ಶೌರ್ಯದಿಂದ ಹೋರಾಟ ಮಾಡುವ ಸ್ವಭಾವವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು. ಆಗ ಮಾತ್ರ ನಾವು ಮತ್ತೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಕಿತ್ತೂರು ರಾಣಿ ಚನ್ನಮ್ಮರಂತಹ ಧೀರ ಮಹಿಳೆಯರನ್ನು ಹುಟ್ಟು ಹಾಕಬಹುದು ಎಂದರು.

ಆಲೂರು ತಾಲೂಕು ಕಾರ್ಜುವಳ್ಳಿಯ ಶ್ರೀ ಸಂಸ್ಥಾನ ಹಿರೇಮಠದ ಶ್ರೀ. ಷ.ಬ್ರ.ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತೊಟ್ಟಿಲು ತೂಗುವ ಕೈ ಮನಸ್ಸು ಮಾಡಿದರೆ ಜಗತ್ತನ್ನೇ ಆಳಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಕಿತ್ತೂರು ರಾಣಿ ಚನ್ನಮ್ಮ. ದಿಟ್ಟತನದಿಂದ ಒಂದು ಸಂಸ್ಥಾನವನ್ನು ನಡೆಸಿ ಇಡೀ ಭಾರತ ದೇಶವನ್ನು ಆಕ್ರಮಿಸಿಕೊಂಡಿದ್ದ ಸೂರ್ಯ ಮುಳುಗದ ಆಡಳಿತ ವ್ಯವಸ್ಥೆಯ ವಿರುದ್ಧ ಒಬ್ಬ ಹೆಣ್ಣುಮಗಳು ಯುದ್ಧ ಕಹಳೆ ಊದುತ್ತಾಳೆ ಎಂದರೆ ಅವಳ ಧೈರ್ಯವನ್ನು ನಾವೆಲ್ಲರೂ ಶ್ಲಾಘಿಸಲೇಬೇಕಿದೆ ಎಂದು ಬಣ್ಣಿಸಿದರು.

ಚನ್ನಮ್ಮ ಆಗಿನ ಕಾಲದಲ್ಲಿಯೇ 64 ವಿದ್ಯೆಗಳನ್ನು ಕಲಿತಿದ್ದರು. ಇಂದು ನಮ್ಮ ಮಕ್ಕಳಿಗೆ ನಾವು ಎಷ್ಟು ರೀತಿಯ ವಿದ್ಯೆಗಳನ್ನು ಕಲಿಸಿದ್ದೇವೆ ಎಂಬುದನ್ನು ಆಲೋಚಿಸಬೇಕಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಸಾಧನೆ ಮಾಡಲು ಮನಸ್ಸಿರುವ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.

ಹಳೇ ಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಯಶೀಲಮ್ಮ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದರು.

ಪುಟ್ಟ ಸಂಸ್ಥಾನದ ಒಡತಿಯಾಗಿ ವೀರಾವೇಷದಿಂದ ಹೋರಾಡಿ ಬ್ರಿಟೀಷರಿಗೆ ಸೋಲಿನ ರುಚಿ ತೋರಿಸಿದರು. ಅವರು ಸಾಗಿಬಂದ ಹಾದಿ ಸುಗಮವಾಗಿರಲಿಲ್ಲ. ಇಂತಹ ಮಹನೀಯರನ್ನು ಅನುಕರಣೆ ಮಾಡಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ಆರಕ್ಷಕ ನಿರೀಕ್ಷಕ ಅನು, ತಹಸೀಲ್ದಾರ್ ನಾಗರಾಜು, ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net