

ಸುಳ್ಯ: ಸುಳ್ಯದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಬಾರಿ ಮೊದಲ ಪ್ರಾಶಸ್ತ್ಯ ನೀಡಿ ಅತಿಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಳ್ಯ ತಾಪಂ ತ್ರೈಮಾಸಿಕ ಸಭೆಯಲ್ಲಿ ಸೋಮವಾರ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿ ಕುರಿತು ವಿವರ ಪಡೆದರಲ್ಲದೆ ಈಗಿನ ಎಸ್.ಆರ್.ರೇಟ್ ಪ್ರಕಾರ ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಎಷ್ಟು ಅನುದಾನ ಬೇಕಾಗಬಹುದೆಂಬ ಸ್ಪಷ್ಟ ಚಿತ್ರಣ ಕೊಡಿ ಎಂದು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
5 ಕೋಟಿ 10 ಲಕ್ಷ ರೂ.ನಲ್ಲಿ 2 ಕೋಟಿ ರೂ.ನ ಕೆಲಸ ಆಗಿದೆ. ಉಳಿಕೆ ಅನುದಾನ ಬೇಕಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಉತ್ತರಿಸಿದರು. ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಕೆಲಸ ವಹಿಸಲಾಗಿತ್ತು. ಈಗ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗ ನಮಗೆ ಅದರ ಸಂಪೂರ್ಣ ವರದಿ ನೀಡಬೇಕು. ಸುಳ್ಯ ಮೀಸಲು ಕ್ಷೇತ್ರ. ಮೀಸಲು ಕ್ಷೇತ್ರದಲ್ಲೇ ಅಂಬೇಡ್ಕರ್ ಭವನ ಆಗದಿದ್ದರೆ ಇನ್ನೆಲ್ಲಿ ಆಗಲು ಸಾಧ್ಯ? ಎಂದು ಶಾಸಕಿ ಪ್ರಶ್ನಿಸಿದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿ ಶೀಘ್ರ ಅದು ಸಂಪೂರ್ಣವಾಗುವಂತೆ ನೋಡಿಕೊಳ್ಳಬೇಕು ಎಂದರು.
ಅಡಕೆಯ ಎಲೆಹಳದಿ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕಿ ರೋಗ ಯಾವ ಗ್ರಾಮಗಳಲ್ಲಿ ವ್ಯಾಪಿಸಿದೆ? ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ತಾಲೂಕಿನ ಒಟ್ಟು ಹತ್ತು ಗ್ರಾಮಗಳಲ್ಲಿ ಎಲೆಹಳದಿ ರೋಗ ವ್ಯಾಪಿಸಿದೆ. ಆದರೆ ಎಲೆಚುಕ್ಕಿ ರೋಗ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಂಡುಬರುತ್ತಿದೆ. ಎಲೆಹಳದಿ ರೋಗಕ್ಕೆ ಔಷಧ ಇಲ್ಲ. ಎಲೆಚುಕ್ಕಿ ರೋಗಕ್ಕೆ ಔಷಧ ವಿತರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇದಕ್ಕುತ್ತರಿಸಿದ ಶಾಸಕಿ ಆರ್ಥಿಕವಾಗಿ ಸಬಲರಾಗಿರುವವರು ಔಷಧಿ ಸಿಂಪಡಣೆ ಮಾಡುತ್ತಾರೆ. ಇಲ್ಲದವರು ಮಾಡುವುದಿಲ್ಲ. ಇದರ ಬದಲಾಗಿ ಸರ್ಕಾರದ ವತಿಯಿಂದಲೇ ಸಾಮೂಹಿಕ ಔಷಧಿ ಸಿಂಪಡಣೆ ನಡೆಸಿದರೆ ಹೇಗೆ? ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಇಲ್ಲಿನ ಕೃಷಿಕರ ಸಮಸ್ಯೆಯ ಬಗ್ಗೆ ಸದನದಲ್ಲಿ ಮೂರು ಬಾರಿ ಪ್ರಸ್ತಾಪಿಸಿದ್ದೇನೆ. ರೋಗ ವ್ಯಾಪಕತೆಯ ಬಗ್ಗೆ ಮತ್ತೊಮ್ಮೆ ವರದಿಯೊಂದಿಗೆ ಪ್ರಸ್ತಾಪಿಸಬೇಕಾಗಿದೆ ಎಂದರು.
ತಹಸೀಲ್ದಾರ್ ಮಂಜುಳಾ ಎಂ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.