ಪೊಲೀಸ್ ಕಮಿಷನರ್ ವರ್ಗಾವಣೆಗೆ ಆಗ್ರಹಿಸಿ ಡಿವೈಎಫ್‌ಐ ರಸ್ತೆ ತಡೆ

mng--28 Nov DYFY Protest 3
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಮಂಗಳವಾರ ಕೂಳೂರುನಲ್ಲಿ ನಡೆಸಿದ್ದ ಪ್ರತಿಭಟನೆ ಈಗ ಪೊಲೀಸ್ ಕಮಿಷನರ್ ವರ್ಗಾವಣೆಯ ಕಡೆಗೆ ತಿರುಗಿದೆ.'

ಪ್ರತಿಭಟನೆಗೆ ಮುನೀರ್ ಕಾಟಿಪಳ್ಳ ಅವರ ವಿರುದ್ಧ ಪೊಲೀಸರು ದಾಖಲಿಸಿದ್ದ ಸ್ವಯಂಪ್ರೇರಿತ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಡಿವೈಎಫ್‌ಐ ಕಾರ್ಯಕರ್ತರು ಗುರುವಾರ ಸಂಜೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ಆಗ್ರಹಿಸಿ ರಾವ್ ಅಂಡ್ ರಾವ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಪೊಲೀಸ್ ಕಮಿಷನರ್ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು ಮುತ್ತಿಗೆ ಹಾಕಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ, ಪೊಲೀಸ್ ಕಮಿಷನರ್ ಮತ್ತು ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ಮಿಯಾಜ್ ನೇತೃತ್ವದಲ್ಲಿ ಮಹಿಳೆಯರನ್ನು ಒಳಗೊಂಡಿದ್ದ 40ಕ್ಕೂ ಮಿಕ್ಕಿ ಕಾರ್ಯಕರ್ತರು ಸೇರಿದ್ದರು. ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ರಸ್ತೆಯಿಂದ ಎಬ್ಬಿಸಿ ಬಸ್ಸಿಗೆ ತುಂಬಿಸಿ ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಕಾರ್ಯಕರ್ತರ ನಡುವೆ ತಳ್ಳಾಟ ಸಂದರ್ಭದಲ್ಲಿ ಕದ್ರಿ ಠಾಣೆ ಎಎಸ್‌ಐ ಮುತ್ತಪ್ಪ ಅಸ್ವಸ್ಥರಾಗಿದ್ದು ನೆಲಕ್ಕೆ ಬಿದ್ದಿದ್ದು ಅವರನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು.

ಕುಳೂರು ಸೇತುವೆಯ ಬಳಿ ಮಂಗಳವಾರ ನಂತೂರು ಸುರತ್ಕಲ್ ಹೆದ್ದಾರಿ ದುರಸ್ತಿ ಮಾಡಬೇಕೆಂದು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆದಿತ್ತು. ಪೊಲೀಸ್ ಅನುಮತಿ ಇಲ್ಲದೆಯೂ ಪ್ರತಿಭಟನೆ ನಡೆಸಿದ್ದಾರೆಂದು ಕಾವೂರು ಠಾಣೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. 15 ದಿನದಲ್ಲಿ ಎರಡನೇ ಎಫ್‌ಐಆರ್ ದಾಖಲಿಸಿದ್ದನ್ನು ವಿರೋಧಿಸಿ, ಪೊಲೀಸ್ ಕಮಿಷನರ್ ವರ್ಗಾವಣೆ ಆಗ್ರಹಿಸಿ ಇದೀಗ ಮಂಗಳೂರು ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net