

ಗುತ್ತಲ: ಚರಂಡಿ ಸ್ವಚ್ಛಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ರೈತನ ನಡುವೆ ವಾಗ್ವಾದ ನಡೆದು ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಸಮೀಪದ ನೆಗಳೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಘಟನೆ ಹಿನ್ನೆಲೆ: ಶುಕ್ರವಾರ ಸುರಿದ ಮಳೆಯಿಂದಾಗಿ ಚರಂಡಿ ತುಂಬಿ ನೀರು ಮುಂದೆ ಹರಿಯದೇ ಕೆಲವರ ಮನೆಗಳಿಗೆ ನುಗ್ಗಿ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯವರು ಜೆಸಿಬಿ ಯಂತ್ರದ ಮೂಲಕ ಶನಿವಾರ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಈ ಕಾರ್ಯಕ್ಕೆ ಅಡ್ಡಿಪಡಿಸಿದ ರೈತ ಶರಣಪ್ಪ ಚಪ್ಪರದ ಅವರು, ‘ಹಲವಾರು ವರ್ಷಗಳಿಂದ ಚರಂಡಿ ನೀರು ನಮ್ಮ ಹೊಲದಲ್ಲಿ ಹರಿಯುತ್ತಿರುವುದರಿಂದ ಜಮೀನು ಹಾಳಾಗುತ್ತಿದೆ. ಚರಂಡಿ ನೀರು ಹರಿದುಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಕಳೆದ ವರ್ಷವೇ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಮೀನಿಗೆ ಚರಂಡಿ ನೀರು ಹೋಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಚರಂಡಿ ನೀರು ಹೊಲಕ್ಕೆ ಹರಿದರೆ ಬೆಳೆ ಬೆಳೆಯುವುದಾದರು ಹೇಗೆ’ ಎಂದು ಪ್ರಶ್ನಿಸಿ ವಾಗ್ವಾದಕ್ಕಿಳಿದರು.
ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಆಕ್ಷೇಪ ವಕ್ತಪಡಿಸಿದ್ದರಿಂದ ರೈತ ಹಾಗೂ ಅಧ್ಯಕ್ಷ ಸುರೇಶ ಸಪ್ಪಣ್ಣನವರ ಮಧ್ಯೆ ಸಂಘರ್ಷ ತಾರಕಕ್ಕೇರಿ ಪರಸ್ಪರ ಕೈ ಕೈ ಮಿಲಾಸಿಯಿಸಿದರು. ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ನಂತರ ಗ್ರಾ.ಪಂ. ಅಧ್ಯಕ್ಷ ಸುರೇಶ ಸಪ್ಪಣ್ಣನವರ, ಸದಸ್ಯರಾದ ಸಿಕಂದರ್ ಮುಲ್ಲಾ, ಹನುಮಂತಪ್ಪ ದೊಡ್ಡವೀರಪ್ಪನವರ ಹಾಗೂ ಗ್ರಾ.ಪಂ ಸಿಬ್ಬಂದಿ ಶೇಖಪ್ಪ ಜಾಲಣ್ಣನವರ, ಸ್ಥಳೀಯರಾದ ಸುಲೇಮಾನ ಸುಂಕದ ಎಂಬುವರ ಮೇಲೆ ರೈತ ಶರಣಪ್ಪ ಹಲ್ಲೆ ನಡೆಸಿದ್ದಾನೆ ಎಂದು ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.