

ತುಮಕೂರು: ಇಷ್ಟುದಿನ ಕರೊನಾ ಶಂಕಿತ ವ್ಯಕ್ತಿಗಳನ್ನು ಮತ್ತು ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿತ್ತು. ಇದೀಗ ಕುರಿಗಳಿಗೂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 40 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡುತ್ತಿಲ್ಲ. ಕಾರಣ ಗೋಡೆಕೆರೆಯ ಕುರಿಗಾಹಿಗೆ ಕರೊನಾ ಸೋಂಕು ತಗುಲಿದೆ. ಹಾಗಾಗಿ ಆತ ಮೇಯಿಸುತ್ತಿದ್ದ 40 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಭೂಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ತಿಳಿಸಿದರು.
ಕುರಿಗಳಿಗೆ ಸೋಂಕು ತಗುಲುತ್ತದೆ ಎಂಬ ಮಾಹಿತಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ವರದಿ ಬರುವವರೆಗೆ ಈ ಕುರಿಗಳನ್ನು ಒಂದೆಡೆ ಕೂಡಿ ಹಾಕಿ ನಿಗಾವಹಿಸಲಾಗುವುದು ಎಂದು ಸಚಿವರು ವಿವರಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಜನರು ಕುರಿಮಾಂಸ ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರ ಅದನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಕುರಿಗಳ ಮೂಲಕ ಕರೊನಾ ಸೋಂಕು ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರಿಗಳ ಸ್ವ್ಯಾಬ್ ಸ್ಯಾಂಪಲ್ಗಳ ವರದಿ ಬಂದ ನಂತರವೇ ಕುರಿಗಳನ್ನು ಮೇಯಲು ಗುಂಪಿನಲ್ಲಿ ಬಿಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದರು.