

ಪುತ್ತೂರು ಗ್ರಾಮಾಂತರ: ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಆಶ್ರಯದಲ್ಲಿ ಪಂಚಲಿಂಗೇಶ್ವರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯಮಟ್ಟದ 17ರ ವಯೋಮಾನದ ಬಾಲಕ- ಬಾಲಕಿಯರ ವಾಲಿಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಕೊಳ್ತಿಗೆಯ ಷಣ್ಮುಖ ದೇವ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಅರಿಯಡ್ಕ ಗ್ರಾಮದ ಪಾಪೆಮಜಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದಿವೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮಣಿಕ್ಕರ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಇರ್ದೆ- ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿವೆ.
ಉದ್ಘಾಟನೆ: ಪಂಚಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಘುನಾಥ ರೈ ಕುತ್ಯಾಳ ಪಂದ್ಯಾಟ ಉದ್ಘಾಟಿಸಿದರು. ಪಂಚಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಅಧ್ಯಕ್ಷತೆ ವಹಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಉಪಾಧ್ಯಕ್ಷ ರಾಮ ಮೇನಾಲ, ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆನಂದ ರೈ ಸಾಂತ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೀತಾರಾಮ ಗೌಡ, ಪಾಣಾಜೆ ಸುಭೋದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ, ಪಂಚಲಿಂಗೇಶ್ವರ ವಿದ್ಯಾಸಂಸ್ಥೆ ನಿರ್ದೇಶಕರಾದ ರವಿರಾಜ್ ರೈ ಸಜಂಕಾಡಿ, ಕೃಷ್ಣಪ್ಪ ಗೌಡ ಕೊಂಕಣಿಗುಂಡಿ, ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಅಣ್ಣಯ್ಯ ಗೌಡ ಉರಿಕ್ಕಾಡಿ ಮತ್ತಿತರರಿದ್ದರು. ಮುಖ್ಯ ಶಿಕ್ಷಕಿ ವನಿತಾ ಪ್ರಸ್ತಾವನೆಗೈದರು. ಪಂಚಲಿಂಗೇಶ್ವರ ವಿದ್ಯಾಸಂಸ್ಥೆ ಸಂಚಾಲಕ ಸರ್ವೋತ್ತಮ ಬೋರ್ಕರ್ ಸ್ವಾಗತಿಸಿದರು. ಶಿಕ್ಷಕಿ ವಿನುತಾ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮುರಲೀಮೋಹನ್ ಶೆಟ್ಟಿ ನಿರೂಪಿಸಿದರು.