

ಪುತ್ತೂರು: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸಲು ಪ್ರವೇಶ ಪಡೆದಿರುವ 'ಛೆಲ್ಲೋ ಶೋ' ಗುಜರಾತಿ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದರ ಹಿಂದೆ ಕರ್ನಾಟಕ ಮೂಲದ ಇಬ್ಬರ ಶ್ರಮವಿದೆ.
ದಕ್ಷಿಣ ಕನ್ನಡ ಮೂಲದ ಶ್ರೇಯಸ್ ಬೆಳ್ತಂಗಡಿ ಮತ್ತು ಪವನ್ ಭಟ್ ಈ ಚಿತ್ರದಲ್ಲಿ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಶ್ರೇಯಸ್ ಮೂಲತಃ ಬೆಳ್ತಂಗಡಿಯವರು. ಆದರೆ ಶ್ರೇಯಸ್ ಹುಟ್ಟಿ ಬೆಳೆದಿರುವುದು ಮುಂಬೈಯಲ್ಲಿ. ಹಲವು ಬಾಲಿವುಡ್ ಚಿತ್ರಗಳಿಗೆ ಸಂಕಲನಕಾರರಾಗಿದ್ದು, ಪ್ರಸಕ್ತ ನ್ಯೂಜಿಲೆಂಡ್‌ನಲ್ಲಿದ್ದಾರೆ. ಅವರ ಮನೆ ಭಾಷೆ ಕೊಂಕಣಿ.
ಉಪ್ಪಿನಂಗಡಿಯ ಪೆರಿಯಡ್ಕದ ಗೋಪಾಲಕೃಷ್ಣ ಭಟ್-ಸರೋಜಾ ಭಟ್ ದಂಪತಿಯ ಪುತ್ರ ಪವನ್ ಭಟ್ ಈಗಾಗಲೇ 22 ಸಿನಿಮಾಗಳಿಗೆ ಸಂಕಲನಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈಗ ಆಸ್ಕರ್‌ಗೆ ಪ್ರವೇಶ ಪಡೆದಿರುವ ಸಿನಿಮಾದ ಮೂಲಕ ಹೆಸರಾಗುತ್ತಿದ್ದಾರೆ.
ಆರ್‌ಆರ್‌ಆರ್, ದಿ ಕಶ್ಮೀರ್ ಫೈಲ್ಸ್, ಬ್ರಹ್ಮಾಸ್ತ್ರದಂಥ ಘಟಾನುಘಟಿ ಸಿನಿಮಾಗಳ ಎದುರು ಛೆಲ್ಲೋ ಶೋ ಆಸ್ಕರ್ ಅಂಗಳ ತಲುಪಿರುವುದನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಣೆ ಮಾಡಿದೆ. 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧೆಗೆ ಈ ಚಿತ್ರ ಭಾರತದಿಂದ ಆಯ್ಕೆಯಾಗಿದೆ.
ಛೆಲ್ಲೋ ಶೋ ಸೆಮಿ ಆಟೋಬಯಾಗ್ರಫಿ ಸಿನಿಮಾ. ಯುವ ಕಲಾವಿದ ಪಾನ್ ನಳಿನ್ ನಿರ್ದೇಶಕ. ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಯುವ ನಟರಾದ ಭವಿನ್ ರಬರಿ, ಭವೇಶ್ ಶ್ರೀಮಲಿ, ರೀಚಾ ಮೀನಾ, ದೀಪೇನ್ ರಾವಲ್, ಪರೇಶ್ ಮೆಹ್ತಾ ಮುಂತಾದವರು ನಟಿಸಿದ್ದಾರೆ.
ಇಂಜಿನಿಯರಿಂಗ್ ಓದಿರುವ ಪವನ್ ಸಿನಿಮಾ ಎಡಿಟಿಂಗ್ ಆಸಕ್ತಿ ಬೆಳೆಸಿಕೊಂಡು, 8 ವರ್ಷ ಮುಂಬೈನಲ್ಲಿದ್ದರು. ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲೂ ಕೆಲಸ ಮಾಡುವಾಸೆ:
ಪವನ್ ಭಟ್ ಕನ್ನಡ ಚಿತ್ರರಂಗದಲ್ಲೂ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ. ನಿರ್ದೇಶಕ ಪಾನ್ ನಳಿನ್ ತಂಡದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅಲ್ಲಿ ತೋರಿದ ಪರಿಶ್ರಮ ನಮಗೆ ದೊಡ್ಡ ಫಲವನ್ನೇ ನೀಡಿದೆ. 25-30 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಇದು ಸೆಮಿ ಆಟೋಬಯಾಗ್ರಫಿ. ನಿರ್ದೇಶಕರ ಜೀವನದ ಕುರಿತು ಕಥೆ ಬರೆದಿದ್ದು ಕ್ರಿಯಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈಗ ನಾನು ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದು, ಕನ್ನಡ ಚಿತ್ರಗಳಲ್ಲೂ ಕೆಲಸ ಮಾಡುವ ಆಸೆ ಇದೆ. ಈಗಾಗಲೇ ಒಂದು ಸಿನಿಮಾ ಮಾತುಕತೆಯಲ್ಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.