

ಪುತ್ತೂರು: ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಡಯಾಲಿಸಿಸ್ ಯುನಿಟ್‌ಗಳನ್ನು ಹಾಕಿ ಪುತ್ತೂರು ಆಸುಪಾಸಿನ ರೋಗಿಗಳಿಗೆ ವಿಳಂಬವಿಲ್ಲದೆ ಡಯಾಲಿಸಿಸ್ ಸೇವೆ ಒದಗಿಸುವ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆಯ ಮುಖಾಂತರ ಪ್ರಯತ್ನ ನಡೆಯುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
ಪುತ್ತೂರಿಗೆ ಭೇಟಿ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಧ್ಯಮದವರೊಂದಿಗೆ ಮಾತನಾಡಿದರು.
ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯು ಕೋವಿಡ್ ಸಮಯದಲ್ಲಿ ಅತ್ಯುತ್ತಮವಾಗಿ ಸೇವೆ ಒದಗಿಸಿದೆ. ಆದರೆ ಆಸ್ಪತ್ರೆ ಕಟ್ಟಡವು ಹಳೆ ಕಾಲದ ಕಟ್ಟಡವಾಗಿರುವುದರಿಂದ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆಯಿದೆ. ಡಯಾಲಿಸಿಸ್ ವಿಷಯದಲ್ಲಿ ಬಹಳಷ್ಟು ಸಮಸ್ಯೆಗಳಾಗುತ್ತಿತ್ತು. ಶಾಸಕರು ಕೂಡ ಬೇರೆ ಬೇರೆ ಸಭೆಗಳಲ್ಲಿ ಪದೇ ಪದೇ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು. ಈ ನಿಟ್ಟಿನಲ್ಲಿ 12 ಡಯಾಲಿಸಿಸ್ ಘಟಕಗಳನ್ನು ಹಾಕಿ ಆಸುಪಾಸಿನ ರೋಗಿಗಳಿಗೆ ವಿಳಂಬವಿಲ್ಲದೆ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.
ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಹೆಚ್ಚುವರಿ ವಾರ್ಡ್‌ಗಳ ಅಗತ್ಯವೂ ಇತ್ತು. ಕೋವಿಡ್‌ನ ಎರಡನೇ ಅಲೆ, ಮೂರನೇ ಅಲೆಯ ಬಳಿಕ ನಾಲ್ಕನೇ ಅಲೆಗೆ ಸಿದ್ಧತೆ ಎನ್ನುವಂತೆ ಎಸ್‌ಡಿಆರ್‌ಎಫ್ ಫಂಡ್‌ನಲ್ಲಿ 60 ಲಕ್ಷ ರೂ.ಗಳನ್ನು ದುರಸ್ತಿಗಾಗಿ ಮೀಸಲಿರಿಸಲಾಗಿದೆ. ಹೆಚ್ಚುವರಿಯಾಗಿ ಕೋವಿಡ್ ವಾರ್ಡ್‌ಗಳನ್ನು ರಚಿಸಲಾಗಿದ್ದು, ಕೋವಿಡ್ ಸದ್ಯಕ್ಕೆ ಕಡಿಮೆಯಾಗಿರುವುದರಿಂದ ಈ ವಾರ್ಡ್‌ಗಳನ್ನು ಡಯಾಲಿಸಿಸ್ ರೂಂಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ ಜಿಲ್ಲಾಧಿಕಾರಿಯವರು, ಮುಂದಿನ 15 ದಿನಗಳಲ್ಲಿ ಡಯಾಲಿಸಿಸ್ ಘಟಕದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಜೊತೆಗೆ ಸೋರುತ್ತಿದ್ದ ಮೇಲ್ಛಾವಣಿಗೆ ಟ್ರೆಸ್ ಶೀಟ್, ಝಿಂಕ್ ಶೀಟ್, ಇಂಟರ್ ಲಿಂಕ್‌ಗಳನ್ನು ಹಾಕಿ ಮೂಲಭೂತ ಸೌಕರ್ಯವನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
*ಡಯಾಲಿಸಿಸ್ ಘಟಕದ ಕಟ್ಟಡ ಕಾಮಗಾರಿ ವೀಕ್ಷಣೆ
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಪುತ್ತೂರು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಡಯಾಲಿಸಿಸ್ ಘಟಕದ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದರು. ಆಸ್ಪತ್ರೆಯ ಹಿಂಬದಿಯಲ್ಲಿ ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಅಭಿಲೇಖಾಲಯ ಇದ್ದಲ್ಲಿ ಸುಸಜ್ಜಿತ ಡಯಾಲಿಸಿಸ್ ಘಟಕಕ್ಕೆ ಕಟ್ಟಡ ನಿರ್ಮಾಣ ನಡೆಯುತ್ತಿದ್ದು ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಶಾಜ್ಯೋತಿ ಪುತ್ತೂರಾಯ ಉಪಸ್ಥಿತರಿದ್ದರು.