ಮುಡಾದಿಂದ ಕೈ ಬಿಡಲು ಸರ್ಕಾರಕ್ಕೆ ಪತ್ರ : ಪುತ್ತಿಗೆ ಗ್ರಾಮಸಭೆಯಲ್ಲಿ ಪಿಡಿಒ ಸ್ಪಷ್ಟನೆ

New Project (52)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮೂಡುಬಿದಿರೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುತ್ತಿಗೆ ಗ್ರಾಮ ಸೇರ್ಪಡೆ ಕುರಿತು ಗ್ರಾಮ ಪಂಚಾಯಿತಿ ಸಾವಾನ್ಯ ಸಭೆಯಲ್ಲಿ ವ್ಯಕ್ತವಾದ ಆಕ್ಷೇಪಣೆಯ ನಿರ್ಣಯದಂತೆ, ಪ್ರಾಧಿಕಾರದಿಂದ ಪುತ್ತಿಗೆ ಗ್ರಾಮ ವ್ಯಾಪ್ತಿಯನ್ನು ಹೊರಗಿಟ್ಟು ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ಬರೆಯಲಾಗುವುದು ಎಂದು ಪಿಡಿಒ ಭೀವಾ ಬಿ.ನಾಯಕ್ ತಿಳಿಸಿದರು.

ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ‘ಮುಡಾ ಮಹಾಯೋಜನೆಗೆ ಪುತ್ತಿಗೆ’ ಗ್ರಾಮ ಸೇರಿಸುವುದನ್ನು ಗ್ರಾಮಸ್ಥರು ವಿರೋಧಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ಕುರಿತು ತಿಳಿಸಿದರು.

ಪುರಸಭೆಯ ವ್ಯಾಪ್ತಿಗೆ ಸಂಬಂಧ ಪಡಬೇಕಾಗಿರುವ ಮೂಡುಬಿದಿರೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬದಿಯಲ್ಲಿರುವ ಪುತ್ತಿಗೆ ಮತ್ತು ಇತರ ಗ್ರಾಮಗಳನ್ನು ಸೇರಿಸಿದ್ದಾರೆ. ಈ ಯೋಜನೆಗೆ ಮೂಡುಬಿದಿರೆಯ ಜನಸಂಖ್ಯೆ ಸಾಲದಿರುವುದರಿಂದ ಹತ್ತಿರದ ಗ್ರಾಮಗಳನ್ನು ಸೇರಿಸಿದ್ದಾರೆ. ಮಹಾ ನಕ್ಷೆಯು ಅಂಗೀಕಾರವಾಗಿದ್ದು ನೋಟಿಫಿಕೇಶನ್  ಮಾತ್ರ ಬಾಕಿಯಿದೆ. ಇದರಿಂದ ಪುತ್ತಿಗೆ ಗ್ರಾಮಕ್ಕೆ ಭಾರೀ ಅನ್ಯಾಯವಾಗಲಿದೆ. ಇದರ ವಿರುದ್ಧ ಪಕ್ಷಬೇಧ ಮರೆತು ಹೋರಾಡದಿದ್ದರೆ ನಮಗೆಲ್ಲ ತೊಂದರೆ ಆಗುತ್ತದೆ ಎಂದು ಗ್ರಾಮಸಭೆಯಲ್ಲಿ ರಾಜೇಶ್ ಕಡಲಕೆರೆ ಎಚ್ಚರಿಸಿದರು.

ಹಂಡೇಲಿನಲ್ಲಿ ಕೃಷಿಭೂಮಿಯನ್ನು ಅನಧಿಕೃತವಾಗಿ ನಿವೇಶನ ಮಾಡಿ ಅಭಿವೃದ್ಧಿ ಪಡಿಸುತ್ತಿದ್ದು, ಮಣ್ಣು ರಾಶಿ ಹಾಕಲಾಗಿದೆ. ಇದು ಮಳೆಗಾಲದಲ್ಲಿ ಕೇರಳ ವಾದರಿಯ ದುರಂತಕ್ಕೆ ಎಡೆಮಾಡಿಕೊಡಲಿದೆ ಎಂದು ಆರೋಪಿಸಿ ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸಭೆಗೆ ಗೈರಾಗಿರುವ ಗಣಿ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹಂಡೇಲಿನ ವರಂಕಿ, ಪುತ್ತಿಗೆಯ ಕಂಚಿಬೈಲಿನಲ್ಲಿ ನೀರಿನ ಸಮಸ್ಯೆಯಿದ್ದು, ಟ್ಯಾಂಕ್ ಮೂಲಕವಾದರೂ ಮನೆಮನೆಗೆ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರಾದ ಹಸನ್ ಮತ್ತು ರಾಮ ಆಗ್ರಹಿಸಿದರು. ಪರಿಶೀಲನೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದಾಗಿ ಪಿಡಿಒ ತಿಳಿಸಿದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಅರಣ್ಯ, ಆರೋಗ್ಯ, ಮೆಸ್ಕಾಂ, ಬ್ಯಾಂಕ್ ಅಧಿಕಾರಿಗಳು ಇಲಾಖೆ ಕುರಿತು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ದಯಾನಂದ ಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ದಂಡ ವಿಧಿಸಲು ಮಾತ್ರ ಅವಕಾಶ

ಸಿ.ಸಿ. ಟಿವಿ ಅಳವಡಿಸಿದಲ್ಲಿಯೇ ಕಸದ ರಾಶಿ ಬಿಸಾಡಿ ಹೋಗುತ್ತಿರುವವರಿಗೆ ಶಿಕ್ಷೆ ನೀಡಬೇಕು ಗ್ರಾಮಸ್ಥ ರೋಶನ್ ತಿಳಿಸಿದರು. ಶಿಕ್ಷೆ ನೀಡುವ ಅಧಿಕಾರ ನಮಗಿಲ್ಲ. ಆದರೆ ದಂಡ ವಿಧಿಸಲು ಅವಕಾಶವಿದೆ ಎಂದು ಪಿಡಿಒ ಸ್ಪಷ್ಟಪಡಿಸಿದರು. ಈ ಹಿಂದೆ ಕಸ ಬಿಸಾಡುವವರನ್ನು ಪೊಲೀಸರ ಸಹಕಾರದೊಂದಿಗೆ ಹಿಡಿದು ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಪೊಲೀಸ್ ಮತ್ತು ಪಂಚಾಯಿತಿ ಜಂಟಿ ಕಾರ್ಯಾಚರಣೆ ಮಾಡಬೇಕೆಂದು ವಾಜಿ ಸದಸ್ಯ ನಾಗವರ್ಮ ಜೈನ್, ವಾದಿರಾಜ್ ಭಟ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net