

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವಾ ಸಮಿತಿಯ ಮೊಗ್ರಾಲ್ ಪುತ್ತೂರು ಪ್ರಾದೇಶಿಕ ಸಮಿತಿಯ ಸಭೆಯು ಎರಿಯಾಕೋಟ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಮಾ.27ರಂದು ನಡೆಯಲಿರುವ ಪಂಚಾಯಿತಿಮಟ್ಟದ ಹೊರೆಕಾಣಿಕೆ ಸಮರ್ಪಣೆ ಹಾಗೂ ಚೌಕಿಯಿಂದ ಉಳಿಯತ್ತಡ್ಕದವರೆಗಿನ ರಸ್ತೆ ಬದಿ ಅಲಂಕಾರದ ಬಗ್ಗೆ ಚರ್ಚಿಸಿ ವಿವಿಧ ತೀರ್ಮಾನ ಕೈಗೊಳ್ಳಲಾಯಿತು.
ಮಾ.27ರಂದು ಸಂಜೆ ಗಂಟೆ 3.30ಕ್ಕೆ ಕಾವುಗೋಳಿ ಶಿವಕ್ಷೇತ್ರ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಪೆರ್ನಡ್ಕ ಭಂಡಾರ ಮನೆಯಿಂದ 4 ಗಂಟೆಗೆ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಪ್ರಾದೇಶಿಕ ಸಮಿತಿಯ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ.
ಪಂಚಾಯಿತಿ ಸಮಿತಿ ಅಧ್ಯಕ್ಷ ಪದ್ಮನಾಭನ್ ಎರಿಯಾಕೋಟ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಹೊರೆಕಾಣಿಕೆ ವಿಭಾಗದ ಪ್ರಮುಖರಾದ ರವೀಂದ್ರ ರೈ ಸಿರಿಬಾಗಿಲು, ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಮಜಲ್, ಕೆ.ಪಿ.ಸಂಪತ್ ಕುಮಾರ್, ಪಂಚಾಯಿತಿ ಸಮಿತಿ ಪ್ರಮುಖರಾದ ಗಣೇಶ್ ನಾಯಕ್ ಬಳ್ಳೂರು, ಉಮೇಶ್ ಕಡಪ್ಪರ, ಶ್ರೀನಿ ಕೊರುವೈಲು ಮೊದಲಾದವರು ಉಪಸ್ಥಿತರಿದ್ದರು.