ವರ‌್ಲಕೊಂಡ ಗ್ರಾಮಸಭೆಯಲ್ಲಿ ತಳ್ಳಾಟ, ಕೂಗಾಟ

29 gudi 1 FJ
Published on

ಸದಸ್ಯರ ನಡುವೆ ಗಲಾಟೆ ನೋಡಿ ವಾಪಸಾದ ಜನ ಪಟ್ಟಿಯಲ್ಲಿಲ್ಲದ ಕಾಮಗಾರಿಗೆ ಬಿಲ್ ಮಾಡಿದ ಆರೋಪ

ಗುಡಿಬಂಡೆ: ತಾಲೂಕಿನ ವರ‌್ಲಕೊಂಡ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆ ಆರೋಪ, ಪ್ರತ್ಯಾರೋಪ, ಕಿರುಚಾಟ, ಕೂಗಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು. ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಂದಿರುವ ಜನಸಾಮಾನ್ಯರು ಗಲಾಟೆ ನೋಡಿ ವಾಪಸ್ ಆದ ಪ್ರಸಂಗ ನಡೆಯಿತು.

ತಾಲೂಕಿನ ವರ‌್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ವಾರ್ಡ್‌ಸಭೆ ನಡೆಸಿ ಸಮಸ್ಯೆಗಳ ಪಟ್ಟಿ ಮಾಡಿ ಶುಕ್ರವಾರ ವರ‌್ಲಕೊಂಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಭೀಮಪ್ಪ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಆದರೆ, ಸಭೆ ಸಂಪೂರ್ಣವಾಗಿ

ಗಲಾಟೆ ಗದ್ದಲಗಳಿಗೆ ಮೀಸಲಾಯಿತು.

ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಬೇಕಾಗಿದ್ದ ಗ್ರಾಮಸಭೆ ಕೇವಲ ಗಲಾಟೆಗಳಿಂದ ಅಂತ್ಯಕಂಡಿದ್ದು ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಜನರ ಮನವಿಯಾಗಿದೆ.

ಅಧ್ಯಕ್ಷ ಭೀಮಪ್ಪ, ಉಪಾಧ್ಯಕ್ಷ ಬಾಬು, ಸದಸ್ಯರಾದ ನರಸಿಂಹಮೂರ್ತಿ, ಆನಂದಮ್ಮ, ವೆಂಕಟರೋಣಮ್ಮ, ಪಿಡಿಒ ಶ್ರೀನಿವಾಸಮೂರ್ತಿ ಇತರರು ಹಾಜರಿದ್ದರು.

ಅಧ್ಯಕ್ಷರ ಮಾತಿಗೆ ಬೆಲೆಯಿಲ್ಲ

ನರೇಗಾ ಯೋಜನೆಯಲ್ಲಿ ದನದ ಕೊಟ್ಟಿಗೆ, ಇಂಗು ಗುಂಡಿ ಸೇರಿ ಇತರ ಕಾಮಗಾರಿಗಳನ್ನು ಮಾಡಿದ್ದೇವೆ. ಆದರೆ, ಇದುವರೆಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಬಿಲ್ ಮಾಡಿಲ್ಲ ಯಾಕೇ ಎಂದು ಪಿಡಿಒ ಮತ್ತು ಅಧ್ಯಕ್ಷರನ್ನು ಕೆಲ ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಭೀಮಪ್ಪ, ಕಾನೂನಿನ ಪ್ರಕಾರ ಕ್ರಿಯಾಯೋಜನೆಯಲ್ಲಿ ಇರುವ ಕಾಮಗಾರಿಗಳು ಮುಗಿದ ಮೇಲೆ ಬಿಲ್ ಮಾಡಬೇಕು. ಆದರೆ, ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಕ್ರಿಯಾಯೋಜನೆಯಲ್ಲಿ ಇಲ್ಲದ ಕಾಮಗಾರಿಗಳಿಗೆ ಬಿಲ್ ಪಾಸ್ ಮಾಡಲು ಹೇಳುತ್ತಾರೆ. ಇದು ಹೇಗೆ ಸಾಧ್ಯ. ಒಂದು ವೇಳೆ ಅನುದಾನ ದುರ್ಬಳಕೆಯಾದರೆ ನಮ್ಮ ಮೇಲೆ ದೂರು ದಾಖಲಾಗುತ್ತದೆ. ನನಗೆ ಸರಿ ಎನಿಸದ ಕಾಮಗಾರಿಗಳಿಗೆ ಬಿಲ್ ಮಾಡಲು ಒಪ್ಪದಿದ್ದಾಗ ನೇರವಾಗಿ ಕಾರ್ಯನಿರ್ವಹಣಾಧಿಕಾರಿಗಳ ಬಳಿ ಬಿಲ್ ಮಾಡಿಸಿದ್ದಾರೆ. ಹೀಗೆ ಮಾಡಿದರೆ ಅಧ್ಯಕ್ಷರಿಗೆ ಬೆಲೆ ಎಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನೆ

ಗ್ರಾಮಸಭೆಯಲ್ಲಿದ್ದ ಕೆಲ ಸಾರ್ವಜನಿಕರು ಗ್ರಾಮ ಪಂಚಾಯಿತಿ ಸದಸ್ಯರ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದು ಗಲಾಟೆಗೆ ಕಾರಣವಾಯಿತು. ನೀನಾ ನಾನಾ ಎಂದು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಸಾರ್ವಜನಿಕರ ಮಧ್ಯ ಪ್ರವೇಶದಿಂದಾಗಿ ತಣ್ಣಗಾಯಿತು.

ಸದಸ್ಯರಲ್ಲೇ ಎರಡು ಗುಂಪು

ಸದಸ್ಯರಲ್ಲಿ ಎರಡು ಗುಂಪುಗಳಾಗಿದ್ದು, ಅವರ ಒಳಜಗಳದಿಂದಾಗಿ ಯೋಜನೆಗಳು ಮತ್ತು ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ. ಮೊದಲು ಸದಸ್ಯರು ಒಂದಾಗಿ ಗ್ರಾಮಗಳನ್ನು ಅಭಿವೃದ್ಧಿಗೆ ಗಮನಹರಿಸಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net