

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರಣಿಕ ಪುರುಷರಾಯ ಬೆಟ್ಟದ ಹೊಸಳಿಗಮ್ಮ, ಪುರುಷರಾಯ ಮತ್ತು ಇತರ ದೈವಗಳ ದೈವಸ್ಥಾನದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ತನಕ ನೇಮೋತ್ಸವ ನಡೆಯಿತು.
ಶನಿವಾರ ಹೊಸಳಿಗಮ್ಮ, ಪುರುಷರಾಯ ಹಾಗೂ ಪಂಜುರ್ಲಿ ದೈವಗಳ ನೇಮ ನಡಾವಳಿಗಳು ಹಾಗೂ ನರ್ತನ ಸೇವೆ ಜರುಗಿತು. ಭಾನುವಾರ ರಾತ್ರಿ ಕಾಜುಕುಜುಂಬ, ಕೆಂಚಿರಾಯ ದೈವಗಳ ನೇಮ ಮತ್ತು ನರ್ತನ ಸೇವೆ ನೆರವೇರಿದವು. ಪುರೋಹಿತ ನಾರಾಯಣ ಭಟ್ ವಿಧಿವಿಧಾನ ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ದೇವಳ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್, ದೇವಳದ ನಾಗೇಶ್ ಎ.ವಿ, ಲೋಕೇಶ್ ಎಂ.ಆರ್, ಎನ್.ಸಿ.ಲಕ್ಷ್ಮಣ, ಪೂಜಾರಿ ದಯಾನಂದ ದೋಣಿಮನೆ ಸಹಿತ ದೇವಳದ ಸಿಬ್ಬಂದಿ ಮತ್ತು ಭಕ್ತರು ಉಪಸ್ಥಿತರಿದ್ದರು.