

ಕೊಟ್ಟೂರು: ಸರ್ಕಾರ ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಿಸಿದ್ದು, ರೈತರು ಬೆಳೆ ಮಾರಾಟಕ್ಕಾಗಿ ಹೆಸರು ನೋಂದಾಯಿಸಲು ತಾಲೂಕಿನಲ್ಲಿ ಖರೀದಿ ಕೇಂದ್ರವೇ ಇಲ್ಲ. ಇದರಿಂದ ಸೂರ್ಯಕಾಂತಿ ಬೆಳೆಗಾರರು ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಹೆಸರಿಗೆ ಆಸಕ್ತಿ ಸೂರ್ಯಕಾಂತಿಗೆ ನಿರಾಸಕ್ತಿ
ಸೂರ್ಯಕಾಂತಿ ಕ್ವಿ.ಗೆ 7280 ರೂ. ದರ ನಿಗದಿ ಮಾಡಲಾಗಿದೆ. ರೈತರು ಹಡಗಲಿ ತಾಲೂಕು ಇಟಗಿ, ಇಲ್ಲವೇ ಕೂಡ್ಲಿಗಿ ತಾಲೂಕು ಹುರುಳಿಹಾಳ ಗ್ರಾಮಕ್ಕೆ ಹೋಗಿ, ಇಲ್ಲಿನ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಈ ಗ್ರಾಮಗಳು ತಾಲೂಕಿನಿಂದ ಕನಿಷ್ಠ 30 ರಿಂದ 40 ಕಿ.ಮೀ. ದೂರವಿದೆ. ಈ ಮೊದಲು ತಾಲೂಕಿನ ಕೋಗಳಿ ಗ್ರಾಮದಲ್ಲಿ ಖರೀದಿ ಕೇಂದ್ರವಿತ್ತು. ಅಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರದ್ದಾಗಿದೆ.
ಎಣ್ಣಿ ಬೆಳೆಗಾರರ ಸಹಕಾರ ಸಂಘ ಇದ್ದಲ್ಲಿಯೇ ಕರ್ನಾಟಕ ಆಯಿಲ್ ಫೆಡರೇಷನ್ ಸೂರ್ಯಕಾಂತಿ ಖರೀದಿ ಕೇಂದ್ರವನ್ನು ತೆರೆಯಲಾಗುತ್ತದೆ. ಅದು ಫೆಡರೇಷನ್ ನಿಯಮ. ಆದರೆ ಕೋಗಳಿ ಹೊರತು ಪಡಿಸಿದರೆ, ಎಣ್ಣೆ ಬೆಳೆಗಾರರ ಸಂಘ ಈ ತಾಲೂಕಿನಲ್ಲಿ ಇಲ್ಲ.
ಕೊಟ್ಟೂರು ಭಾಗದಲ್ಲಿ 680ಹೆಕ್ಟೇರ್, ಕೋಗಳಿ ಭಾಗದಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆದ ರೈತರು ಇಟಗಿ ಇಲ್ಲವೇ ಹುರುಳಿಹಾಳು ಗ್ರಾಮಕ್ಕೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬೇಕು.
ಸೂರ್ಯಕಾಂತಿ ಬೆಳೆದ ರೈತರು ಕೊಟ್ಟೂರು ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಒತ್ತಾಯಿಸಿ ಇಲ್ಲಿನ ಮಾರುಕಟ್ಟೆ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಜಿಲ್ಲಾಧಿಕಾರಿ ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿ ಹಾಗೂ ಕೃಷಿ ಇಲಾಖೆಗೆ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ವರ್ಷ ಕೋಗಳಿಯಲ್ಲಿ ಖರೀದಿ ಕೇಂದ್ರ ಆರಂಭಿಸಿದಾಗ 1.5 ಕೋಟಿ. ರೂ. ವ್ಯವಹಾರವಾಗಿತ್ತು. ಇಲ್ಲಿ ಸಿಬ್ಬಂದಿ ಇದ್ದಾರೆ. ಆದರೆ ಇಲ್ಲಿನ ಖರೀದಿ ಕೇಂದ್ರ ರದ್ದುಪಡಿಸಿದ್ದು ಅಚ್ಚರಿ ಮೂಡಿಸಿದೆ. ಶಾಸಕರನ್ನು ಕಂಡು ಅಳಲನ್ನು ಹೇಳಲು ಹೋದಾಗ, ಅವರು ಸಿಗಲಿಲ್ಲ. ಇದು ಜಿಲ್ಲಾಧಿಕಾರಿ ನಿರ್ಧಾರವೆಂಬುದು ನಂತರ ತಿಳಿಯಿತು. ಸೂರ್ಯಕಾಂತಿ ಬೆಳೆದ ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಪರದಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನಾನುಕೂಲವಾಗಿದೆ.ಬಿ.ಎಂ. ಮರುಳಸಿದ್ದಯ್ಯಎಪಿಎಂಸಿ ಮಾಜಿ ನಿರ್ದೇಶಕ