

ವಿಲಾಸ ಮೇಲಗಿರಿ ಬೆಂಗಳೂರು
ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ನಾಲ್ಕು ಉತ್ಪನ್ನಗಳ ಖರೀದಿಗೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಸರು, ಸೂರ್ಯಕಾಂತಿ, ಸೋಯಾಬಿನ್, ಉದ್ದು ಖರೀದಿಗೆ ಸರ್ಕಾರ ಸನ್ನದ್ಧವಾಗಿದೆ.
ಈಗಾಗಲೇ ಹೆಸರು, ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸಿರುವ ಸರ್ಕಾರ ನೋಂದಣಿ ಆರಂಭಿಸಿದೆ. ಹೆಸರುಕಾಳು ಮಾರಾಟಕ್ಕೆ ರೈತರು ಆಸಕ್ತಿ ತೋರಿದ್ದಾರೆ. ಆದರೆ ಸೂರ್ಯಕಾಂತಿ ಮಾರಾಟ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಬೆಂಬಲ ಬೆಲೆ ಖರೀದಿ ಆರಂಭಕ್ಕಿಂತಲೂ ಮುಂಚೆಯೇ ರೈತ ಕೈಗೆ ಸಿಕ್ಕಷ್ಟು ಬೆಲೆಗೆ ಸೂರ್ಯಕಾಂತಿ ಮಾರಾಟ ಮಾಡಿರುವುದು ಹಿನ್ನಡೆಗೆ ಕಾರಣವಾಗಿದೆ.
ಖರೀದಿ ಪ್ರಕ್ರಿಯೆಗೂ ಮುನ್ನ ಸರ್ಕಾರ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಇಚ್ಚಿಸುವ ರೈತರ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದು, ಅಕ್ಟೋಬರ್ 10ಕ್ಕೆ ನೋಂದಣಿ ಗಡುವು ಮುಗಿಯುತ್ತದೆ.
ಹೆಸರು ಕಾಳು ಮಾರಾಟಕ್ಕೆ ಈವರೆಗೆ 14,532 ರೈತರು ಹೆಸರು ನೋಂದಾಯಿಸಿಕೊಂಡಿದ್ದು, 1,07,075.50 ಕ್ವಿಂಟಾಲ್ ಮಾರಾಟ ಮಾಡಲು ಮುಂದೆ ಬಂದಿದ್ದಾರೆ. ನೋಂದಣಿಗೆ ಇನ್ನೂ 25 ದಿನ ಬಾಕಿ ಇದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದಷ್ಟು ಹೆಸರು ಕಾಳು ಖರೀದಿಯಾಗುವ ನಿರೀಕ್ಷೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಟ್ಟುಕೊಂಡಿದೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಹೆಸರು ಕಾಳು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷ ಕ್ವಿಂಟಾಲ್ ಹೆಸರುಕಾಳು ಉತ್ಪಾದನೆ ಗುರಿ ಇದೆ.
ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಮಾಡುವುದಕ್ಕಿಂತ ಮುಂದೆ ಕ್ವಿಂಟಾಲ್‌ಗೆ ಸುಮಾರು 6800-7000 ರೂ. ಇತ್ತು. ಖರೀದಿ ೋಷಣೆ ಮಾಡುತ್ತಲೇ ಕ್ವಿಂಟಾಲ್‌ಗೆ 1000 ರೂ. ದರ ಏರಿಕೆ ಕಂಡಿದೆ. ಕೇಂದ್ರ ಸರ್ಕಾರ 8682 ರೂ. ದರದಲ್ಲಿ ಖರೀದಿ ಮಾಡುತ್ತಿದೆ.
ಸೂರ್ಯಕಾಂತಿ ನೋಂದಣಿ ಪ್ರಗತಿ ತೀರಾ ಕಡಿಮೆ ಆಗಿದೆ. ಈಗಾಗಲೇ ಬಹುತೇಕ ರೈತರು ಸೂರ್ಯಕಾಂತಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದರಿಂದ ರೈತರಿಗೆ ಎಂಎಸ್‌ಪಿ ಖರೀದಿಯಿಂದ ಪ್ರಯೋಜನ ದೊರೆಯುತ್ತಿಲ್ಲ. ಕಳೆದ ತಿಂಗಳೇ ಖರೀದಿ ಕೇಂದ್ರ ಆರಂಭಿಸಿದ್ದರೆ ಹೆಚ್ಚಿನ ರೈತರು ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಾಗುತ್ತಿತ್ತು. ಸರ್ಕಾರ ಬೆಳೆ ಕಟಾವು ಪರಿಗಣಿಸಿ ಖರೀದಿ ಆರಂಭಿಸಬೇಕು. ಆಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ರೈತರು ಸಾಮಾನ್ಯವಾಗಿ ಸೂರ್ಯಕಾಂತಿಯನ್ನು ದಾಸ್ತಾನು ಇಟ್ಟುಕೊಳ್ಳುವುದಿಲ್ಲ ಎಂದು ರೈತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಾರಿ ಗುಂಡ್ಲಪೇಟೆಯಲ್ಲಿ ಹೆಚ್ಚು ಸೂರ್ಯಕಾಂತಿ ಖರೀದಿಸಲಾಗಿತ್ತು. ಆದರೆ, ಈ ಬಾರಿ ಅಲ್ಲೂ ರೈತರ ಬಳಿ ಸೂರ್ಯಕಾಂತಿ ಇಲ್ಲ.
ಸರ್ಕಾರ ಸೂರ್ಯಕಾಂತಿ ಕ್ವಿಂಟಾಲ್‌ಗೆ 7280 ರೂ. ದರ ನಿಗದಿ ಮಾಡಿದರೆೆ ಮಾರುಕಟ್ಟೆಯಲ್ಲಿ 5500-6000 ರೂ. ಇದೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಸೂರ್ಯಕಾಂತಿ ಮಾರಾಟ ಮಾಡಲು 1374 ರೈತರು ನೋಂದಣಿ ಮಾಡಿಕೊಂಡಿದ್ದು, ಕೇವಲ 11,147 ಕ್ವಿಂಟಾಲ್ ಖರೀದಿ ಸಾಧ್ಯತೆ ಇದೆ. ವಿಚಿತ್ರವೆಂದರೆ, ಕೇಂದ್ರ ಸರ್ಕಾರ 1.30 ಲಕ್ಷ ಕ್ವಿಂಟಾಲ್ ಸೂರ್ಯಕಾಂತಿ ಖರೀದಿಗೆ ಅನುಮತಿ ನೀಡಿದೆ. ಕಳೆದ ಬಾರಿ ಒಟ್ಟು 46,000 ಕ್ವಿಂಟಾಲ್ ಸೂರ್ಯಕಾಂತಿಯನ್ನು ಖರೀದಿಸಲಾಗಿತ್ತು. 42000 ಕ್ವಿಂಟಾಲ್ ಚಾಮರಾಜನಗರ ಜಿಲ್ಲೆಯೊಂದರಲ್ಲೇ ಖರೀದಿ ಆಗಿತ್ತು. ಈ ಬಾರಿ 10 ಸಾವಿರ ಕ್ವಿಂಟಾಲ್‌ಗೆ ನೋಂದಣಿಯಾಗಿದೆ.
ಸೋಯಾಬಿನ್, ಉದ್ದು ಖರೀದಿಗೆ ರೈತರ ಹೆಸರು ನೋಂದಣಿ ಪ್ರಕ್ರಿಯೆ ಮುಂದಿನ ವಾರದಿಂದ ಶುರುವಾಗಲಿದೆ. ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ನಡೆದಿದೆ. ಸ್‌ಟಾವೇರ್ ಸಿದ್ಧಪಡಿಸಲಾಗಿದೆ. ಅಕ್ಟೋಬರ್ ಮೊದಲ ವಾರ ಉದ್ದು ಕಟಾವಿಗೆ ಬರುವುದರಿಂದ ಬೆಂಬಲೆ ಬೆಲೆ ಖರೀದಿಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹೆಸರುಕಾಳು:
ಜಿ ನೋಂದಾಯಿತ ರೈತರ ಸಂಖ್ಯೆ ಉತ್ಪನ್ನ(ಕ್ವಿಂ)
ಬೆಳಗಾವಿ 662 4725.00
ಬೀದರ್ 174 873.00
ಧಾರವಾಡ 3633 28,072.00
ಗದಗ 8493 61,142.00
ಕಲಬುರಗಿ 214 1395.00
ಕೊಪ್ಪಲ 1394 10,866.50
ಯಾದಗಿರಿ 2 12.00
ಸೂರ್ಯಕಾಂತಿ:
ಜಿಲ್ಲೆ ನೋಂದಾಯಿತ ರೈತರ ಸಂಖ್ಯೆ ಉತ್ಪನ್ನ(ಕ್ವಿಂ)
ಬೆಳಗಾವಿ 11 107.00
ಚಾಮರಾಜನಗರ 1158 8922.50
ಚಿಕ್ಕಮಗಳೂರು 32 284.50
ಗದ 87 846.50
ಮೈಸೂರು 3 21.50
ರಾಯಚೂರು 83 965.00