ಕಾಮಗಾರಿಗಳಲ್ಲಿ ಲೋಪವಾಗದಂತೆ ಎಚ್ಚರವಹಿಸಿ ; ಗ್ರಾಮಗಳಲ್ಲಿ ನರೇಗಾದಿಂದ ಅಭಿವೃದ್ಧಿ ; ಗ್ರಾಪಂ ಅಧ್ಯಕ್ಷ ಮಧುಸೂಧನ ಅಭಿಮತ

PÜPܱÜ
Published on

ಕನಕಪುರ  : ತಾಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಪಂನಿಂದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ, ಮಹಿಳಾ ಮತ್ತು ಮಕ್ಕಳ ಹಾಗೂ ವಿಶೇಷ ಗ್ರಾಮ ಸಭೆ ಶುಕ್ರವಾರ ಗ್ರಾಪಂ ಅಧ್ಯಕ್ಷ ಎಚ್.ಎಸ್.ಮಧುಸೂಧನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಮಾಜಿಕ ಲೆಕ್ಕಪರಿಶೋಧ ತಾಲೂಕು ಸಂಯೋಜಕಿ ಕಮಲಮ್ಮ ಮಾತನಾಡಿ, ನರೇಗಾ ಯೋಜನೆಯಿಂದ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದೇವೆ. ಕನಕಪುರ ತಾಲೂಕು ಮುಂಚೂಣಿಯಲ್ಲಿದೆ. ಗ್ರಾಮಸ್ಥರಿಗೆ ಹಾಗೂ ರೈತರಿಗೆ ಅನುಕೂಲವಾಗುವ ಕಾಮಗಾರಿಗಳು ಜಾರಿಗೆ ತರುವುದರ ಜತೆಯಲ್ಲಿ ಗುಣಮಟ್ಟದ ರಸ್ತೆ, ಚರಂಡಿ ಹಾಗೂ ರೈತರಿಗೆ ಅನುಕೂಲವಾಗುವ ಕಾಮಗಾರಿ ಅಲ್ಲದೇ, ಶೌಚಗೃಹ, ಬಚ್ಚಲುಗುಂಡಿ, ಕೋಳಿ, ಕುರಿ, ದನದ ಕೊಟ್ಟಿಗೆಗಳ ನಿರ್ಮಾಣದ ಮೂಲಕ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಬೇಕು.

ನರೇಗಾ ಕಾಮಗಾರಿಗಳನ್ನು ಪಂಚಾಯಿತಿಯಲ್ಲಿ ಇನ್ನು ಹೆಚ್ಚು ಹೆಚ್ಚು ಕೈಗೊಳ್ಳುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು, ಜಾಬ್‌ಕಾರ್ಡ್‌ನ ಕೂಲಿ ವೆಚ್ಚ ಹಾಗೂ ಸಾಮಾಗ್ರಿ ವೆಚ್ಚವು ನೇರವಾಗಿ ತಮ್ಮ-ತಮ್ಮ ಖಾತೆಗಳಿಗೆ ವರ್ಗಾವಣೆಯಾಗುವುದರಿಂದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಪ್ರತ್ಯೇಕವಾಗಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತನಾಡಿ, ಮಕ್ಕಳ ಸಾಕ್ಷರತೆಗೆ ಸರ್ಕಾರ ಹಲವು ಯೋಜನೆಗಳ ಮೂಲಕ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಿದೆ, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಗಿಡ ವಿತರಿಸಿ ಅದನ್ನು ನೆಡುವ ಬಗ್ಗೆ ವಿವರಣೆ ನೀಡುವಾಗ ರೈತರಾದ ಕೃಷ್ಣಪ್ಪ, ಶಿವಣ್ಣ ಮಾತನಾಡಿ, ಇಲಾಖೆಯಿಂದ ಗಿಡ ನೆಡುವುದು ಬದಿಗಿರಲಿ, ನಿತ್ಯ ರೈತರಿಗೆ ಆನೆ, ಕಾಡು ಹಂದಿಗಳ ಕಾಟ ತಪ್ಪಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಗ್ರಾಮ ಸಭೆಯಲ್ಲಿ ವಿವಿಧ ಕಾಮಗರಿಗಳ ಪಟ್ಟಿಯನ್ನು ತಯಾರಿಸಿ ಅನುಮೋದನೆಯನ್ನು ಪಡೆಯಲಾಯಿತು. ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ಮುರಳೀಧರ್ ಕರ್ತವ್ಯ ನಿರ್ವಹಿಸಿದರು. ಅರಣ್ಯ ಇಲಾಖೆ ಕಿರಣ್, ವಿಜಿಕುಮಾರ್, ಸದಸ್ಯರಾದ ಗೋಪಿ, ಜಯರಾಮ್, ರಾಮಚಂದ್ರು, ರಾಜೇಂದ್ರ, ನಾಗರಾಜು, ಜಯಮ್ಮ, ಚೌಡಮ್ಮ, ಸುಮಿತ್ರಬಾಯಿ, ಮುನಿಬಸಯ್ಯ, ಮುದ್ದಮ್ಮ, ತಿಬ್ಬೇಗೌಡ, ಎಸ್‌ಡಿಎ ಮೋಹನ್‌ರಾವ್, ಪುಟ್ಟೇಗೌಡ ಸೇರಿ ಗ್ರಾಮಸ್ಥರು ಇದ್ದರು.

ಕಾಮಗಾರಿಗಳಲ್ಲಿ ಸಣ್ಣಪುಟ್ಟ ಲೋಪದೋಷಗಳನ್ನು ವಾರದಲ್ಲಿ ಸ್ಥಳ ಪರಿಶೀಲಿಸಿ ಸರಿಪಡಿಸಿಕೊಳ್ಳಲಾಗುವುದು. ಜತೆಗೆ ಪಂಚಾಯಿತಿಯಿಂದ ಪೂರ್ಣಗೊಂಡಿರುವ ನರೇಗಾ ಅನುಷ್ಠಾನ ಯೋಜನೆ 5 ವರ್ಷ ಸಮರ್ಪಕವಾಗಿ ಇರಬೇಕೆಂಬ ನಿಯಮವಿದ್ದರೂ ಕೆಲವರು ನಾಮ ಫಲಕ ಬಿದ್ದು ಹೋಗಿರುವ ಮತ್ತು ಬೇರೆಯವರು ತೆಗೆದುಕೊಂಡು ಹೋಗಿರುವ ಕಾರಣಗಳನ್ನು ನೀಡುತ್ತಾರೆ. ಪಂಚಾಯಿತಿಯಲ್ಲಾಗಿರುವ ಶೌಚಗೃಹ ಸಂಪರ್ಕ ಪೈಪ್‌ಗಳನ್ನು ಸರಿಯಾಗಿ ಅಳವಡಿಸಲು ಅರಿವು ಮೂಡಿಸಲಾಗುವುದು. ಎನ್.ಎಸ್. ರಘು, ಗ್ರಾಪಂ ಅಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net