

ರಾಮನಗರ : ಕೊರತೆಯ ನಡುವೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದಲ್ಲಿ ಮಂಗಳವಾರ ಶಿಕ್ಷಕರು ಪ್ರತಿಭಟನೆ ನಡೆಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ವಿಧಾನ ಪರಿಷತ್ ಸದಸ್ಯರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಶಿಕ್ಷಕ ಸಮುದಾಯ ಇತ್ತೀಚೆಗೆ ರಾಮನಗರದ ತುರುಪಲಾಯ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದ ಜಿಪಂ ಸಿಇಒ ಅನ್ಮೋಲ್ ಜೈನ್ ಕ್ರಮವನ್ನು ವಿರೋಧಿಸಿ ಘೋಷಣೆ ಕೂಗಿದರು.
ಎಂಎಲ್‌ಸಿ ಪುಟ್ಟಣ್ಣ ಮಾತನಾಡಿ, ಶಿಕ್ಷಕರನ್ನು ಪಾಠ ಮಾಡಲು ಬಿಡದ ಅಧಿಕಾರಿಗಳು, ಹೆಚ್ಚಿನ ಫಲಿತಾಂಶ ಕೇಳುವ ಪರಿಪಾಠ ಹೆಚ್ಚಾಗಿದೆ. ಶಿಕ್ಷಕರು ಬೋಧನೆಗಿಂತ ಶಾಲಾ ಶೌಚಗೃಹ ಸ್ವಚ್ಛತೆ, ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ, ಊಟ ಬಡಿಸುವುದು, ಪಾತ್ರೆ ತೊಳೆಯುವುದು ಸೇರಿ ಇತರ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಇದೆ. ಇದರ ನಡುವೆ ಮಕ್ಕಳು ತರಗತಿ ಮತ್ತು ಶಾಲಾವರಣ ಸ್ವಚ್ಛಗೊಳಿಸಿದ ಕಾರಣಕ್ಕೆ ಶಿಕ್ಷಕರನ್ನು ಅಮಾನತುಗೊಳಿಸಿ, ಅವರ ಮನೋಬಲ ಕುಗ್ಗಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛತೆ ಮಾಡಿಸುವುದು ತಪ್ಪು. ಉಳಿದಂತೆ ಮಕ್ಕಳು ತರಗತಿ ಹಾಗೂ ಶಾಲಾವರಣ ಸ್ವಚ್ಛ ಮಾಡಿದರೆ ತಪ್ಪೇನು? ಸ್ವಚ್ಛತೆ ಶಿಕ್ಷಣದ ಒಂದು ಭಾಗ. ನಮ್ಮ ಪರಿಸರವನ್ನು ನಾವು ಶುಚಿಯಾಗಿಟ್ಟುಕೊಳ್ಳಬೇಕು. ಅದನ್ನು ಶಾಲೆಯಲ್ಲಲ್ಲದೆ ಇನ್ನೆಲ್ಲಿ ಕಲಿಸಬೇಕು? ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳದೆ ಶಿಕ್ಷಕರನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡುವ, ನೋಟಿಸ್ ನೀಡುವ ಚಾಳಿ ಬಿಡಬೇಕು ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ, ರಾಜ್ಯ ಪದವಿಪೂರ್ವ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಕೆ., ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಅನುದಾನಿತ ಮತ್ತು ಅನುದಾನ ರಹಿತ
ಸ್ವಚ್ಛತೆಗೆ ಪರ್ಯಾಯ ವ್ಯವಸ್ಥೆ ಮಾಡಿ: ಶಾಲೆಗಳಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸಲು ಗ್ರೂಪ್ ಡಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ, ಇದುವರೆಗೆ ಯಾವ ಸರ್ಕಾರಗಳೂ ಆ ಬಗ್ಗೆ ಗಮನ ಹರಿಸುತ್ತಿಲ್ಲ. ನಾನು ಓದುತ್ತಿದ್ದ ಕಾಲದಿಂದ ಇಲ್ಲಿಯವರೆಗೂ ಮಕ್ಕಳೇ ತರಗತಿ ಮತ್ತು ಶಾಲಾವರಣವನ್ನು ಸ್ವಚ್ಛ ಮಾಡುವ ಪರಿಪಾಠವಿದೆ. ಇದರ ಬಗ್ಗೆ ಅರಿವಿಲ್ಲದ ಅಧಿಕಾರಿಗಳು ಕೆಲವರ ಮಾತು ಕೇಳಿಕೊಂಡು ಮಕ್ಕಳಿಂದ ಕೆಲಸ ಮಾಡಿಸಿದರೆಂಬ ಕಾರಣ ಮುಂದಿಟ್ಟು ಶಿಕ್ಷಕಿಯ ಅಮಾನತು ಶಿಕ್ಷೆ ನೀಡಿದ್ದಾರೆ. ಮೊದಲು ಸ್ವಚ್ಛತೆಗೆ ಪರ್ಯಾಯ ವ್ಯವಸ್ಥೆ ಮಾಡಿ. ಶಿಕ್ಷಣ ಇಲಾಖೆ ಶೌಚಗೃಹ ಮತ್ತು ಶಾಲಾವರಣ ಸ್ವಚ್ಛತೆಯನ್ನು ಹೊರಗುತ್ತಿಗೆ ನೀಡಬೇಕು. ಅವರು ನಿರ್ದಿಷ್ಟ ಶಾಲೆಗಳನ್ನು ವಹಿಸಿಕೊಂಡು ಸ್ವಚ್ಛತೆ ಮಾಡಿದರೆ, ಶಿಕ್ಷಕರು ಸಹ ನಿರಾಳರಾಗುತ್ತಾರೆ ಎಂದು ಪುಟ್ಟಣ್ಣ ಹೇಳಿದರು.
ಒತ್ತಡ ಕಡಿಮೆ ಮಾಡಿ: ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರ ಮತ್ತು ಗ್ರೂಪ್ ಡಿ ಸಿಬ್ಬಂದಿ ಕೊರತೆ ಇದೆ. ವಿಷಯವಾರು ಮತ್ತು ಮಕ್ಕಳ ಸಂಖ್ಯೆಗೆ ಶಿಕ್ಷಕರಿಲ್ಲದಿದ್ದರೂ, ಇರುವವರೇ ಹೆಚ್ಚಿನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಶೈಕ್ಷಣಿಕೇತರ ಕೆಲಸಗಳ ಒತ್ತಡದಲ್ಲಿ ಸಿಲುಕಿ ನರಳುತ್ತಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡಿ, ಶಿಕ್ಷಕರು ಮತ್ತಷ್ಟು ಉತ್ತಮವಾಗಿ ಬೋಧನೆ ಮಾಡುವಂತೆ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ರಾಮೋಜಿಗೌಡ ಆಗ್ರಹಿಸಿದರು.