ಶೌಚಗೃಹಕ್ಕೆ ಮಗುವಿನ ಶವ ಎಸೆದವರ ಸೆರೆ ; ದೃಷ್ಕೃತ್ಯ ಎಸಗಿದ ನವಜಾತ ಶಿಶುವಿನ ತಂದೆ-ತಾಯಿ ಜೈಲಿಗೆ

8888
Published on

ರಾಮನಗರ : ಹಾರೋಹಳ್ಳಿ ತಾಲೂಕಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಶೌಚಗೃಹದ ಪಿಟ್‌ನಲ್ಲಿ ನವಜಾತ ಶಿಶು ಮೃತ ದೇಹ ಪತ್ತೆ ಪ್ರಕರಣ ಭೇದಿಸಿರುವ ಪೊಲೀಸರು, ಮಗುವಿನ ಪಾಲಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ನೇಪಾಳ ಮೂಲದ ಸುರೇಂದ್ರ ಮೆಹ್ತಾ (21) ಮತ್ತು ಅಮೃತಾ ಕುಮಾರಿ (20) ಬಂಧಿತರು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.

ಏನಿದು ಘಟನೆ?: ಸುರೇಂದ್ರ ಮೆಹ್ತಾ ಮತ್ತು ಅಮೃತಾ ಕುಮಾರಿ ಇಬ್ಬರೂ ಸಂಬಂಧಿಗಳಾಗಿದ್ದು, ಪ್ರೀತಿಸುತ್ತಿದ್ದರು. ಆದರೆ, ಅವರ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಕೆಲಸ ಅರಸುತ್ತಾ ಕಳೆದ ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಂದ್ರ ಮೆಹ್ತಾ ಹಾರೋಹಳ್ಳಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ನಂತರ ಅಮೃತಾ ಕುಮಾರಿಯೂ ಒಂದೂವರೆ ವರ್ಷಗಳ ಹಿಂದೆ ಸುರೇಂದ್ರ ನನ್ನು ಕೂಡಿಕೊಂಡಿದ್ದಳು. ಇದರ ನಡುವೆ ಅಮೃತಾ ಕುಮಾರಿ ಗರ್ಭಿಣಿಯಾಗಿದ್ದಳು. ಮದುವೆ ಆಗಿದೆ ಎನ್ನಲಾಗಿದೆಯಾದರೂ ಇದು ಇನ್ನೂ ಖಾತ್ರಿಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವೆಂಬರ್ 24ರಂದು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ವೈದ್ಯರನ್ನು ಕಾಣಲು ಬಂದಿದ್ದಾರೆ. ಆದರೆ, ಭಾಷೆ ತೊಡಕಿನ ಕಾರಣ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದೇ ವೇಳೆಗೆ ಅಮೃತಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಶೌಚಗೃಹಕ್ಕೆ ತೆರಳಿದ್ದಾಳೆ. ಈ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಜನಿಸುತ್ತಲೇ ಮಗು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ದಂಪತಿ ಮಗುವನ್ನು ಕಮೋಡ್‌ಗೆ ಹಾಕಿ ಫ್ಲೆಷ್ ಮಾಡಿ, ನಂತರ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿಂದ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿ ಕ್ಯಾಮರಾ ಸುಳಿವು  : ಈ ಘಟನೆ ಸಂಚಲವನ್ನೇ ಸೃಷ್ಟಿಸಿದ್ದರಿಂದ ಪೊಲೀಸರಿಗೂ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಪ್ರಕರಣ ದಾಖಲಿಸಿಕೊಂಡು ಡಿಎನ್‌ಎ ಮೂಲಕ ಪಾಲಕರ ಪತ್ತೆಗೂ ಕ್ರಮ ಕೈಗೊಂಡಿದ್ದರು. ಇದರ ಜತೆಗೆ ಆಸ್ಪತ್ರೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಸುರೇಂದ್ರ ಮೆಹ್ತಾ ಮತ್ತು ಅಮೃತಾ ಕುಮಾರಿ ಆಸ್ಪತ್ರೆಗೆ ಬಂದಿರುವುದು, ಸುಮಾರು ಒಂದೂವರೆ ಗಂಟೆ ಶೌಚಗೃಹದಲ್ಲಿಯೇ ಇರುವುದು ಪತ್ತೆಯಾಗಿದೆ. ನಂತರ ಹುಡುಕಾಟ ಆರಂಭಿಸಿ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗಗೊಂಡಿದೆ. ಸದ್ಯ, ಪೊಲೀಸ್ ಅಧಿಕಾರಿ ಅರ್ಜುನ್ ನೇತೃತ್ವದ ಹಾರೋಹಳ್ಳಿ ಪೊಲೀಸರು ಮಗುವಿನ ತಂದೆ ತಾಯಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net