

ಹೆಬ್ರಿ: ನಮ್ಮ ಓದು ನಮ್ಮ ಬದುಕಿಗೆ ಆದರ್ಶವಾಗಬೇಕು. ಕಷ್ಟಪಟ್ಟು ಸಾಧನೆ ಮಾಡಿ ಓದಿ ನಮ್ಮ ಬದುಕನ್ನು ಸದೃಢವಾಗಿ ಬೆಳೆಸಿ ಮುನ್ನಡೆಸಬೇಕು, ಅದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಯೋಜನೆ ಮೂಲಕ ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದೆ ಎಂದು ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಹೆಬ್ರಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಶನಿವಾರ 2024-25ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ಹಾಗೂ ಅನುದಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಬ್ರಿಯ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿ ರೂವಾರಿ ಉದ್ಯಮಿ ಎಚ್.ಸತೀಶ್ ಪೈ ಶುಭಹಾರೈಸಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿವೇತನದ ಫಲಾನುಭವಿ ಶಿಕ್ಷಕ ಅಮೃತ್ ಅನಿಸಿಕೆ ವ್ಯಕ್ತಪಡಿಸಿದರು. 18 ವಿಭಾಗಗಳಲ್ಲಿ ವಿವಿಧ ಸವಲತ್ತು, ಅನುದಾನ ವಿತರಿಸಲಾಯಿತು.
ಹೆಬ್ರಿ ಸಬ್ಇನ್ಸ್ಪೆಕ್ಟರ್ ಮಹೇಶ್ ಟಿ.ಎಂ., ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಜನಜಾಗೃತಿ ವೇದಿಕೆ ಚಾರ ವಲಯಾಧ್ಯಕ್ಷ ವಾದಿರಾಜ ಶೆಟ್ಟಿ, ಹೆಬ್ರಿ ವಲಯಾಧ್ಯಕ್ಷ ನರೇಂದ್ರ ನಾಯಕ್, ಹೆಬ್ರಿ ಚೈತನ್ಯ ಯುವ ವೃಂದದ ಗೌರವಾಧ್ಯಕ್ಷ ಎಚ್.ಜನಾರ್ಧನ್, ಯೋಜನೆ ಕೇಂದ್ರ ಸಮಿತಿ ಒಕ್ಕೂಟ ಅಧ್ಯಕ್ಷ ಪ್ರವೀಣ್ ಹೆಗ್ಡೆ, ವಲಯಾಧ್ಯಕ್ಷೆ ಶಾಲಿನಿ ಭಂಡಾರಿ, ವಿವಿಧ ಪದಾಧಿಕಾರಿಗಳು, ಯೋಜನೆಯ ವಿವಿಧ ವಿಭಾಗಗಳ ಪ್ರಮುಖರು ಉಪಸ್ಥಿತರಿದ್ದರು.
ಪ್ರಸ್ತುತ ವರ್ಷದಲ್ಲಿ ಉಡುಪಿ ಜಿಲ್ಲೆಯ 2 ಸಾವಿರ ಸೇರಿ ರಾಜ್ಯದ 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ರೂ.ಗಳನ್ನು ಸುಜ್ಜಾನನಿಧಿ ಶಿಷ್ಯವೇತನ ನೀಡಲಾಗಿದೆ.-ಆನಂದ ಸುವರ್ಣ ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ https://www.vijayavani.net/vaccination-camp