ಕನ್ನಡತಿ ಅಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ… ಆಟೋ ಚಾಲಕನ ವಿರುದ್ಧ ಪಂಜಾಬ್ ಮಹಿಳೆ ತೀವ್ರ ಅಸಮಾಧಾನ

ವಿಜಯವಾಣಿ (54)
Published on

ಬೆಂಗಳೂರು: ದೇಶ-ವಿದೇಶಗಳಿಂದ ಕರುನಾಡಿಗೆ ಆಗಮಿಸುವ ಜನರು, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಯ ಸ್ಥಳಗಳಿಗೆ ಭೇಟಿ ಕೊಡಲು ಆಟೋ ರಿಕ್ಷಾಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಗೆ ತಿರುಗಾಡಲು ಹಣವಿದೆ ಆದರೆ ಭಾಷೆ ಗೊತ್ತಿಲ್ಲ. ಕನ್ನಡಿಗರಾಗದ ಕಾರಣ ಕೆಲವರು ಇಲ್ಲಿನ ಸ್ಥಳೀಯ ಭಾಷೆಗೆ ಆದ್ಯತೆ ನೀಡದೆ, ಕಲಿಯುವುದಿಲ್ಲ, ಕಲಿಯುವ ಪ್ರಯತ್ನ ಕೂಡ ಮಾಡಲ್ಲ. ಇದು ಬೇಸರದ ಸಂಗತಿ ನಿಜ. ಆದ್ರೆ, ಕನ್ನಡ ಬಾರದೆ ಇದ್ದರೂ ಸಹ ಸ್ವಲ್ಪ ಸ್ವಲ್ಪ ಮಾತನಾಡುವ ಮೂಲಕ ಒಂದಷ್ಟು ಮಂದಿ ಎಲ್ಲರ ಗಮನಸೆಳೆದು, ನಾವು ಕೂಡ ಕನ್ನಡಿಗರೇ ಎಂದು ಪರಿಚಯಿಸುತ್ತಾರೆ. ಇಲ್ಲೊಬ್ಬರು ಮಹಿಳೆ ಪಂಜಾಬ್​ನಿಂದ ಬೆಂಗಳೂರಿಗೆ ಬಂದಿದ್ದು, ಆಟೋ ಚಾಲಕನ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

"ಕಳೆದ ಒಂದೂವರೆ ವರ್ಷದಿಂದ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂಲತಃ ಪಂಜಾಬ್​ನಿಂದ ಬಂದಿರುವ ಕಾರಣ, ಇಂದಿಗೂ ಕೂಡ ನಾನು ಅಲ್ಲಿನ ಸಂಪ್ರದಾಯದಂತೆ ಉಡುಗೆ ತೊಡುತ್ತೇನೆ. ನನ್ನ ಮದುವೆ ನಡೆದಿದ್ದು ಪಂಜಾಬ್​ನಲ್ಲಿ. ಹೀಗಾಗಿ ಯಾರೇ ನನ್ನನ್ನು ನೋಡಿದ್ರೆ ಅವರಿಗೆ ನಾನು ಉತ್ತರ ಭಾರತದವಳು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇದರಿಂದ ಕೆಲವರು ನನಗೆ ಕನ್ನಡ ಭಾಷೆ ಮಾತನಾಡಲು ಬರುವುದಿಲ್ಲ ಎಂದೇ ತಾವೇ ನಿರ್ಧರಿಸುತ್ತಾರೆ" ಎಂದರು.

ಶಾಣಿ ನಾನಿ ಎಂಬ ಮಹಿಳೆ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, "ಬೆಂಗಳೂರಿನ ಆಟೋ ಚಾಲಕರ ನಡೆಯಿಂದ ನನಗೆ ತುಂಬ ಬೇಸರ ಉಂಟಾಗಿದೆ. ಅವರಲ್ಲಿ ತಾರತಮ್ಯ ಮನೋಭಾವವಿದೆ. ಇದನ್ನು ನಾನು ಇತ್ತೀಚೆಗಷ್ಟೇ ಅನುಭವಿಸಿದೆ. ಎಂದಿನಂತೆ ಮನೆಯಿಂದ ಆಫೀಸ್​ಗೆ ಆಟೋದಲ್ಲಿ ತೆರಳುತ್ತಿದ್ದಾಗ ಆಟೋ ಚಾಲಕರೊಬ್ಬರು ನನಗೆ ಕನ್ನಡ ಬರುವುದಿಲ್ಲ ಎಂದು ತಿಳಿದು ಮನಬಂದಂತೆ ಪ್ರಯಾಣ ದರ ಹೆಚ್ಚಿಗೆ ಕೇಳುತ್ತಾರೆ. ನನಗೆ ಕೇವಲ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಮಾತನಾಡಲು ಬರುತ್ತದೆ ಎಂದು ಭಾವಿಸಿ ಅವರು ಹೀಗೆಲ್ಲಾ ಮಾಡಿದ್ದು ಬಹಳ ನೋವುಂಟಾಯಿತು" ಎಂದಿದ್ದಾರೆ.

ಶಾಣಿ ಪೋಸ್ಟ್ ನೋಡುತ್ತಿದ್ದಂತೆ ಅನೇಕ ವಲಸಿಗರು ಕಮೆಂಟ್ ಸೆಕ್ಷನ್​ನಲ್ಲಿ ತಮಗೂ ಕೂಡ ಇದೇ ರೀತಿಯ ಅನುಭವಗಳು ಆಗಿದೆ ಎಂದು ಹಂಚಿಕೊಂಡರೆ, ಇನ್ನೂ ಕೆಲವರು ಇದನ್ನು ಒಪ್ಪಿಕೊಳ್ಳದೆ, ನಾವು ನಿಮ್ಮಂತೆಯೇ ವಲಸೆ ಬಂದಿದ್ದು, ಮೂರು ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದೇವೆ. ನೀವು ಹೇಳಿದಂತೆ ಇಲ್ಲಿನ ಜನರು ಆ ರೀತಿ ನಮ್ಮನ್ನು ಎಂದಿಗೂ ನಡೆಸಿಕೊಂಡಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net