

* ಕಂದಾಯ ಇಲಾಖೆ ಎಡವಟ್ಟು ಸರಿಯಾಗಲು ಇನ್ನೆಷ್ಟು ದಿನ ಬೇಕೋ? ರಾಮನಗರದ ಆನುಮಾನಹಳ್ಳಿ ರೈತರ ಅಳಲು
ತಮ್ಮದಲ್ಲದ ತಪ್ಪಿಗೆ ಬರೋಬ್ಬರಿ 55 ಕುಟುಂಬಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದು, ಇವರ ನೋವಿಗೆ ಸ್ಪಂದಿಸಬೇಕಿರುವ ಜಿಲ್ಲಾಡಳಿತ ಕಳೆದ ಹಲವು ವರ್ಷಗಳಿಂದಲೂ ಕಾಲಹರಣ ಮಾಡುವ ಮೂಲಕ ನಿರ್ಲಕ್ಷೃವಹಿಸಿದೆ.
ಹೌದು... ಸುಮಾರು 80 ವರ್ಷಗಳ ಹಿಂದೆ ಒಂದು ಒಳ್ಳೆಯ ಉದ್ದೇಶಕ್ಕಾಗಿ ಜಮೀನು ಕಳೆದುಕೊಂಡ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಆನುಮಾನಹಳ್ಳಿಯ ಹಲವು ಕುಟುಂಬಗಳಿಗೆ ಪಕ್ಕದಲ್ಲಿಯೇ ಇದ್ದ ಗೋಮಾಳದಲ್ಲಿ ಬದಲಿ ಜಮೀನು ಮಂಜೂರು ಮಾಡಿಕೊಡಲಾಗಿತ್ತು. ಆದರೆ, ಅಂದು ದಾಖಲೆಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಮಾಡಿದ ತಪ್ಪಿಗೆ, ಯಾರದ್ದೋ ತಪ್ಪು ಮತ್ಯಾರಿಗೋ ಶಿಕ್ಷೆ ಎಂಬಂತೆ ಈಗಲೂ ರೈತರು ಕಷ್ಟ ಅನುಭವಿಸುತ್ತಿದ್ದು, ಇದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಸರ್ಕಾರಿ ಕಚೇರಿಗಳ ಬಾಗಿಲಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ. ಒಂದು ಸಣ್ಣ ತಪ್ಪನ್ನು ಸರಿಪಡಿಸಲಾಗದ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಸ್ವಾತಂತ್ರೃ ಬರುವ ಒಂದು ವರ್ಷ ಮುಂಚಿತವಾಗಿ ಅಂದರೆ 1946ರ ಸುಮಾರಿಗೆ ಹಿಂದಿನ ಬೆಂಗಳೂರು ಜಿಲ್ಲೆ, ಈಗಿನ ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಕಣ್ವ ಬಳಿ ಜಲಾಶಯ ನಿರ್ಮಾಣ ಮಾಡಲಾಯಿತು. ಈ ಜಲಾಶಯಕ್ಕೆ ಮುಳುಗಡೆಯಾಗಿದ್ದ ಹಲವು ಗ್ರಾಮಗಳಲ್ಲಿ ಜೋಡಿದಾರ್ ಆನುಮಾನಹಳ್ಳಿ ಗ್ರಾಮವೂ ಒಂದು. ಈ ಗ್ರಾಮದ ರೈತರಿಗೆ ಪಕ್ಕದಲ್ಲಿಯೇ ಇದ್ದ ಸರ್ವೇ ನಂ.1ರ ಗೋಮಾಳದಲ್ಲಿ 19 ಗುಂಟೆಯಿಂದ ಆರಂಭಗೊಂಡು 10 ಎಕರೆವರೆಗೂ 55 ಮಂದಿಗೆ 1959-60ರಲ್ಲಿ ಅಂದಿನ ಬೆಂಗಳೂರು ಜಿಲ್ಲೆಯ ಇನಾಂ ಜಿಲ್ಲಾಧಿಕಾರಿ ಮಂಜೂರು ಮಾಡಿಕೊಟ್ಟಿದ್ದಾರೆ.
ಆದರೆ, ಈ ವೇಳೆ ಸರ್ವೇ ನಂ.1ರ ಬದಲು 11 ಎಂದು ನಮೂದು ಮಾಡಿ ತಪ್ಪೆಸಗಲಾಗಿದೆ. ಇಲ್ಲಿ ಸರ್ವೇ ನಂ.11ರಲ್ಲಿ ಕೇವಲ 6.01 ಎಕರೆ ಜಮೀನು ಮಾತ್ರವೇ ಇದ್ದು, ಬೇರೆಯವರ ಒಡೆತನದಲ್ಲಿ ಇದೆ. ಆದರೆ ತಮಗೆ ಮಂಜೂರಾದ ಸರ್ವೇ ನಂ.1ರ ಜಮೀನಿನಲ್ಲಿ ಕಣ್ವ ಮುಳುಗಡೆ ಪ್ರದೇಶದ ಜನರು ಅನುಭವದಲ್ಲಿ ಇದ್ದು, ಸರ್ವೇ ನಂಬರ್ ಬದಲಾವಣೆಯಿಂದ ಒಂದಿಲ್ಲೊಂದು ತೊಂದರೆ ಅನುಭವಿಸುತ್ತಲೇ ಬಂದಿದ್ದಾರೆ.
ಸರ್ವೇ ನಂ.1ರ ಬದಲು 11 ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟು ಸರಿಪಡಿಸಿಕೊಡುವಂತೆ ಕಳೆದ ಹಲವು ದಶಕಗಳಿಂದಲೂ ಸ್ಥಳೀಯರು ಅಂದಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರದಿಂದ ಇಂದಿನ ರಾಮನಗರ- ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾದ ನಂತರವೂ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಈ ಸಂಬಂಧ ಕೊಟ್ಟ ಅರ್ಜಿಗಳು ಲೆಕ್ಕಕ್ಕಿಲ್ಲ. ಆದರೆ, ಅಧಿಕಾರಿಗಳು ಇಲಾಖೆ ನಡುವೆ ಪತ್ರ ವ್ಯವಹಾರ ನಡೆಸಿರುವುದು ಬಿಟ್ಟರೆ, ಉಳಿದಂತೆ ರೈತರಿಗೆ ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ. ಆದರೆ, 55 ರೈತ ಕುಟುಂಬಗಳಲ್ಲಿ ಹಲವರು ಮೃತಪಟ್ಟು ಮೂರನೇ ತಲೆಮಾರಿನವರು ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ.
ಸರ್ವೇ ನಂಬರ್ ಬದಲಾವಣೆಯಿಂದ ಜಮೀನು ಹಂಚಿಕೆ, ಮಾರಾಟ, ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಆಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಮ್ಮ ಕಷ್ಟ ಎಂದರೆ ಜಮೀನುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಣ್ಣ ತಮ್ಮಂದಿರ ನಡುವೆ ಜಮೀನು ಹಂಚಿಕೆಯೂ ಆಗುತ್ತಿಲ್ಲ. ಮತ್ತೊಂದು ದುರಂತದ ಸಂಗತಿ ಎಂದರೆ ಮಂಜೂರಾತಿ ಪಡೆದುಕೊಂಡ ಮೂಲ ವ್ಯಕ್ತಿ ಮೃತಪಟ್ಟರೆ ನಂತರ ಜಮೀನು ಹಂಚಿಕೆ ಮಾಡಿಕೊಳ್ಳಲು ಹೋದರೆ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಖಾತೆ ಬದಲಾವಣೆ ಮಾಡಿಕೊಡಲಾಗುತ್ತಿದೆ. ಇದರಿಂದ ಕುಟುಂಬದಲ್ಲಿಯೂ ಸಹ ಮನಸ್ತಾಪಗಳು ಉಂಟಾಗುತ್ತಿದ್ದು, ಜನತೆ ಹೈರಾಣಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿ ಕಾರಿ ಹೆಜ್ಜೆಯಿಟ್ಟಿರುವ ಸಚಿವ ಕೃಷ್ಣ ಭೈರೇಗೌಡ ಅವರೇ ಈ ಸಮಸ್ಯೆ ನಿಮ್ಮ ಗಮನಕ್ಕೆ ಬಂದಿಲ್ಲವೇ? ಒಳ್ಳೆಯ ಉದ್ದೇಶಕ್ಕಾಗಿ ಜಮೀನು ಕಳೆದಕೊಂಡವರು ಕಳೆದ ಹಲವಾರು ವರ್ಷಗಳಿಂದಲೂ ಪರಿತಪಿಸುತ್ತಿದ್ದು, ಇವರಿಗೆ ನ್ಯಾಯ ಕೊಡಿಸುವ ಕೆಲಸ ನಿಮ್ಮಿಂದ ಆಗಬೇಕಿದೆ. ಮಾಗಡಿ ವಿಧಾನಸಭೆ ಕ್ಷೇತ್ರಕ್ಕೆ ಈ ಸಮಸ್ಯೆ ಒಳಪಟ್ಟಿದ್ದು ಶಾಸಕ ಎಚ್.ಸಿ. ಬಾಲಕೃಷ್ಣ ಅವರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಇತ್ತ ಜಿಲ್ಲಾಡಳಿತ ಸಮಸ್ಯೆ ಆಳಕ್ಕೆ ಇಳಿದು ಕೂಡಲೇ ಸ್ಪಂಧಿಸುವ ಕೆಲಸ ಮಾಡಿಕೊಡಬೇಕಿದೆ. ತಪ್ಪು ನಮ್ಮದಲ್ಲ. ಆದರೂ ನಮ್ಮ ತಂದೆ ಕಾಲದಿಂದಲೂ ಸಮಸ್ಯೆ ಪರಿಹಾರಕ್ಕೆ ಅಲೆಯುತ್ತಿದ್ದೇವೆ. ಜಮೀನುಗಳು ಇದ್ದರೂ ಸರ್ವೇ ನಂಬರ್ ಬದಲಾಗಿರುವುದು ಸಮಸ್ಯೆಯನ್ನು ತಂದೊಡ್ಡಿದೆ. ಸರ್ಕಾರ ಈಗಲಾದರೂ ನಮ್ಮ ನೋವಿಗೆ ಸ್ಪಂದಿಸಲಿ. ಎ.ಜಿ. ನಾಗೇಶ್, ಅಧ್ಯಕ್ಷರು, ಶ್ಯಾನುಬೋಗನಹಳ್ಳಿ ಪಂಚಾಯಿತಿ ಭೂ ಮಂಜೂರಾತಿ ಟ್ರಿಬುನಲ್ ಆಗಿದ್ದು, ಇಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾನೂನಿನ ಅಡಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡು ರೈತರ ನೆರವು ನೀಡುವ ಕ್ರಮವಹಿಸಲಾಗುವುದು. ಯಶವಂತ ವಿ ಗುರುಕರ್, ಜಿಲ್ಲಾಧಿಕಾರಿ, ರಾಮನಗರ