ಪೂಜೆಗಿಂತ ಕಾಯಕವೇ ಶ್ರೇಷ್ಠ :ಸಾಣೇಹಳ್ಳಿ ಸ್ವಾಮೀಜಿ ಅಭಿಮತ

Puja, Kayaka, Great, Wise,
Published on

ಚಿತ್ರದುರ್ಗ: ಬುದ್ಧಿಜೀವಿಗಳಾದ ಮಾನವರು ಅವಿವೇಕಿಗಳಾಗದೆ, ವಿವೇಕಿಗಳಾಗಬೇಕು. ಇದು ಸತ್ಯದ ಮಾರ್ಗದಲ್ಲಿ ಮುನ್ನಡೆಸಲು ಉತ್ತೇಜನ ನೀಡುತ್ತದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಹೊಳಲ್ಕೆರೆ ತಾಲೂಕು ಆರ್.ನುಲೇನೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕಾಯಕಯೋಗಿ ಶರಣ ನುಲಿಯ ಚಂದಯ್ಯ’ ಸ್ಮರಣೋತ್ಸವ ಹಾಗೂ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನುಲಿಯ ಚಂದಯ್ಯ ಇಡೀ ನಾಡಿಗೆ ಕಾಯಕದ ಮಹತ್ವ ಸಾರಿದವರು. ಇದರಲ್ಲಿ ನಿರತರಾದವರು ಲಿಂಗಪೂಜೆ, ಗುರುಪೂಜೆ, ಜಂಗಮರ ಸೇವೆ ಮರೆತರು ಅದು ಅಪರಾಧವಲ್ಲವೆಂದು ಹೇಳುವ ಮೂಲಕ ಅರಿವು ಮೂಡಿಸಿದ ಮಹಾ ಚಿಂತಕ ಎಂದು ಬಣ್ಣಿಸಿದರು.

ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಆದರೆ, ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬ ಮಾತಿನನ್ವಯ ಮುಂದೆ ನೈತಿಕ ನೆಲೆಗಟ್ಟು ಸಿಗದೆ ಇರಬಹುದು. ಏಕೆಂದರೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಡುತ್ತಿಲ್ಲ.

ಉತ್ತಮ ಅಂಕಗಳಿಸಿ ಯಾವುದೇ ಪದವಿ ಪಡೆದರೂ ಪ್ರಯೋಜನಕ್ಕೆ ಬರಲಾರದು. ಸಂಸ್ಕಾರ, ಸತ್ಕಾರ, ಸದ್ಗುಣ ಮೈಗೂಡಿಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗುವುದಕ್ಕಿಂತ ದೊಡ್ಡ ಪದವಿ ಮತ್ತೊಂದಿಲ್ಲ ಎಂದು ಸಲಹೆ ನೀಡಿದರು.

ವ್ಯಕ್ತಿತ್ವದಿಂದ ಘನತೆ ಹೆಚ್ಚಳ
ಮಾನವರಲ್ಲಿ ಅಹಂಕಾರ ಎಂದಿಗೂ ಒಳ್ಳೆಯದಲ್ಲ. ಇದು ದುರ್ಗುಣ ಬೆಳೆಸಿ ತಪ್ಪು ದಾರಿಯತ್ತ ಕೊಂಡೊಯ್ಯುತ್ತದೆ.

ಪರೋಪಕಾರಿ ಮನೋಭಾವ, ವ್ಯಕ್ತಿತ್ವದಿಂದ ಸಮಾಜದಲ್ಲಿ ಘನತೆ ಹೆಚ್ಚಲಿದೆ. ಈ ಕುರಿತು ಎಲ್ಲರೂ ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಎಂ.ಚಂದ್ರಪ್ಪ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎ.ದೇವರಾಜಯ್ಯ, ಎಸ್.ಆರ್.ಗಿರೀಶ್, ಬಸವರಾಜ್ ಹನುಮಲಿ, ಅಣಬೇರು ರಾಜಪ್ಪ, ತಹಸೀಲ್ದಾರ್ ಎನ್.ಜೆ.ನಾಗರಾಜ್, ಗ್ರಾಪಂ ಅಧ್ಯಕ್ಷೆ ರಂಗಮ್ಮ, ಕುಮಾರ್, ಬಸವಲಿಂಗಪ್ಪ, ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net