ತುಮಕೂರಿನಲ್ಲಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್​ ಕೂಟ

PU_Sports11
Published on

ತುಮಕೂರು: ರಾಷ್ಟ್ರಮಟ್ಟದ ಅಥ್ಲೆಟಿಕ್ಸ್​ ಕೂಟವನ್ನು ತುಮಕೂರಿನಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್​ ಕ್ರೀಡಾಕೂಟವನ್ನು ಬಲೂನ್​ಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದ ಸಚಿವರು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ತುಮಕೂರಿನಲ್ಲಿ ನಿರ್ಮಿಸಲಾಗಿದ್ದು ಮುಂದಿನ ಬಾರಿ ತುಮಕೂರಿನಲ್ಲಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್​ ಕೂಟದ ಆಯೋಜಿಸಲು ಅವಕಾಶ ನೀಡುವಂತೆ ಅಥ್ಲೆಟಿಕ್ಸ್​ ೆಡರೇಷನ್​ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್​ ಕೂಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗೆದ್ದಿಲ್ಲ. ಒಲಿಂಪಿಕ್ಸ್​ನಲ್ಲು ಸಾಕಷ್ಟು ಹಿಂದೆಬಿದ್ದಿದ್ದೀವಿ. ಎಂದು ಸಚಿವ ಪರಮೇಶ್ವರ ಬೇಸರಿಸಿದರು.

ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಉದ್ಘಾಟನೆ ಸಂದರ್ಭದಲ್ಲಿ ಏಷ್ಯಾ ರಾಷ್ಟ್ರಗಳ ಆಹ್ವಾನಿತ ಅಥ್ಲೆಟಿಕ್ಸ್​ ಕೂಟ ಆಯೋಜಿಸುವ ಚಿಂತನೆಯಿತ್ತು. ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಕ್ರೀಡಾಂಗಣವನ್ನು ಬಳಸಿಕೊಳ್ಳಲು ಗ್ರಾಮೀಣಪ್ರತಿಭೆಗಳಿಗೆ ಪೂರಕವಾಗಿ ಅಥ್ಲೆಟಿಕ್​ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕ್ರೀಡೆಗಳು ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಾಮರಸ್ಯದ ಬದಕು ಕಟ್ಟಿಕೊಳ್ಳಲು ಸಹಕಾರಿಯಾಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವವರನ್ನು ಒಂದೆಡೆಗೆ ಸೇರಿಸುವ ಮೂಲ ಏಕತೆಯ ಮನೋಭಾವ ಬೆಳೆಸುವ ಇಂತಹ ಕ್ರೀಡಾಕೂಟಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದ ಅವಶ್ಯಕತೆ ಇದೆ ಎಂದರು.

ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಿಂದ 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ರಾಜ್ಯಮಟ್ಟದ ಕ್ರೀಡಾಕೂಟದ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅಥ್ಲೆಟಿಕ್ಸ್​ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾಧಿಕಾರಿ ಶುಭಕಲ್ಯಾಣ, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಶಾಲಾ ಶಿಕ್ಷಣಇಲಾಖೆ (ಪದವಿ ಪೂರ್ವ)ನಿರ್ದೇಶಕ ಸಿಂಧು ಬಿ. ರೂಪೇಶ, ಸಹಾಯ ನಿರ್ದೇಶಕ (ಕ್ರೀಡೆ) ಗುಬ್ಬಿಗೂಡು ರಮೇಶ್​, ಕೇಂದ್ರ ಕಚೇರಿ ಜಂಟಿ ನಿರ್ದೇಶಕ ಎಸ್​.ಉಮೇಶ್​, ಅಪರ ಜಿಲ್ಲಾಧಿಕಾರಿ ಡಾ. ಎನ್​.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ ಕುಮಾರ ಶೆಟ್ಟಿ, ಟಿ.ಆರ್​.ರೋಹಿತ್​ ಗಂಗಾಧರ್​, ಟಿ.ಆರ್​.ಬಸವರಾಜು, ಎ.ಎನ್​.ಪ್ರಭಾಕರ್​ ಮತ್ತಿತರರು ಉಪಸ್ಥಿತರಿದ್ದರು.

ವಿವಿಗಳಲ್ಲಿ ಅಥ್ಲೆಟಿಕ್ಸ್​ಗಿಲ್ಲ ಪ್ರೋತ್ಸಾಹ

ಪದವಿ ಓದುತ್ತಿದ್ದಾಗ ಬೆಲ್ಜಿಯಂನಲ್ಲಿ ನಡೆದ ವಿಶ್ವ ವಿವಿಗಳ ಅಥ್ಲೆಟಿಕ್ಸ್​ ಕೂಟದಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಆ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಥ್ಲೆಟಿಕ್ಸ್​ಗೆ ಹೆಚ್ಚಿನ ಪ್ರೋತ್ಸಾಹವಿತ್ತು. ಅಲ್ಲದೆ, ರಾಜ್ಯ, ರಾಷ್ಟ್ರಮಟ್ಟಗಳ ಕ್ರೀಡಾಕೂಟಕ್ಕೆ ಹೆಚ್ಚಿನ ಕ್ರೀಡಾಪಟುಗಳನ್ನು ವಿವಿಗಳಿಂದಲೇ ಆಯ್ಕೆ ಮಾಡಲಾಗುತ್ತಿತ್ತು. ಈಗ ವಿವಿಗಳಲ್ಲಿ ಅಥ್ಲೆಟಿಕ್ಸ್​ಗೆ ಪ್ರೋತ್ಸಾಹವೇ ಇಲ್ಲವಾಗಿದೆ. ಯಾವೊಬ್ಬ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಪ್ರತಿನಿಧಿಸುತ್ತಿರುವುದು ಕಾಣುತ್ತಿಲ್ಲ ಎಂದು ಸಚಿವ ಪರಮೇಶ್ವರ ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net