

ತುಮಕೂರು: ನಮ್ಮದು ಬೆಸೆಯುವ ಸಂಸ್ಕೃತಿ, ಎಲ್ಲವನ್ನು ಬೆಸೆದುಕೊಂಡು ನಾಡನ್ನು ರೂಪಿಸಿಕೊಂಡಿದ್ದೇವೆ. ಹಾಗಾಗಿ, ನಾವು ಕೋಮುವಾದಿಗಳಾಗಬಾರದು, ಜಾತಿವಾದಿಗಳಾಗಬಾರದು, ಕನ್ನಡವಾದಿಗಳಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಜಿಲ್ಲಾ ಪ್ರಾಚಾರ್ಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಸಾಂಸತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ, ಪ್ರಾದೇಶಿಕವಾಗಿ ನೂರಾರು ಸಂಸತಿಗಳು ನಮ್ಮ ನಾಡಿನಲ್ಲಿಯೇ ಇವೆ, ಇಂತಹ ವೈವಿಧ್ಯಮಯ ಸಂಸತಿಗಳ ನಡುವೆ ಏಕ ಸಂಸತಿಯ ಹೇರಿಕೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು. 2011ರ ಜನಗಣತಿ ಪ್ರಕಾರ ದೇಶದಲ್ಲಿ 19560 ತಾಯ್ನುಡಿಗಳು ದಾಖಲಾಗಿವೆ. ಈ ಎಲ್ಲವೂ ಸಂಸತಿಗಳೇ ಅನೇಕ ಬಣ್ಣಗಳ ರಂಗೋಲಿಯಂತೆ ಭಾರತವು ಸಹ ಅನೇಕ ಬಣ್ಣಗಳ ಭಾರತವಾಗಿವೆ. ನಮ್ಮದು ವೈವಿಧ್ಯಮಯ ಭಾರತ, ಏಕ ಸಂಸತಿಯದ್ದಲ್ಲ ಎಂದು ಹೇಳಿದರು.
ಕಲಿಕೆಗೆ ಬಡವ, ಶ್ರೀಮಂತ ಎಂಬ ತಾರತಮ್ಯ ಇರುವುದಿಲ್ಲ. ಸೃಷ್ಠಿಯಲ್ಲಿ ಎಲ್ಲರಿಗೂ ಒಂದೇ ರೀತಿಯಾದ ಬುದ್ಧಿಶಕ್ತಿ ಕೊಟ್ಟಿರುವಾಗ ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶಿಕ್ಷಣ ಕಲಿಕೆ ಮತ್ತು ಸಾಂಸತಿಕ ಚಟುವಟಿಕೆಯಿಂದ ಮನುಷ್ಯನ ಸರ್ವತೋಮುಖ ವಿಕಾಸವಾಗುತ್ತದೆ, ಉತ್ತಮ ಶಿಕ್ಷಣ ಪಡೆಯುವ ಎಲ್ಲ ಅಗತ್ಯ ಸೌಲಭ್ಯಗಳು ಇಂದು ಲಭ್ಯ ಇವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು.ಅಂಕ, ಪದವಿ ಮನುಷ್ಯನ ವ್ಯಕ್ತಿತ್ವದ ಅಳತೆಗೋಲಲ್ಲ, ಮನುಷ್ಯನ ಮನುಷ್ಯನ ಸರ್ವತೋಮುಖ ಅಭಿವೃದ್ಧಿಯನ್ನು ವ್ಯಕ್ತಿತ್ವದ ಅಳತೆ ಗೋಲು ಎಂದು ಹೇಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಅತ್ಯುತ್ತಮ ಭವಿಷ್ಯ ಕಂಡುಕೊಳ್ಳಬೇಕು. ಜಿಲ್ಲೆಯ ಪದವಿ ಪೂರ್ವ ಕಾಲೇಜಗಳಲ್ಲಿ ಬದಲಾವಣೆ ಬಯಸಿ, ಫಲಿತಾಂಶಗಳಲ್ಲಿ ಸಾಧನೆ ಮಾಡುಲು ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಅವರು ಉತ್ತಮ ಹೆಜ್ಜೆ ಇಡುತ್ತಿದ್ದಾರೆ. ಇವರ ಹೊಸ ಬದಲಾವಣೆಗೆ ತಕ್ಕಂತೆ ಪ್ರಾಂಶುಪಾಲರು, ಉಪನ್ಯಾಸಕರು ಸಹಕಾರ ನೀಡಿ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾಗಬೇಕು ಎಂದರು.
ಸಾಹಿತಿ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಸಾಂಸತಿ ಬದುಕು ಬಡವಾದರೆ ನಾವೆಷ್ಟೇ ಶ್ರೀಮಂತರಾದರೂ ಪ್ರಯೋಜನವಿಲ್ಲ. ಸಾಂಸತಿಕ ಕ್ಷೇತ್ರ ರಾಜಕಾರಣವನ್ನು ನಿಯಂತ್ರಿಸುತ್ತದೆ. ಹಾಗಾಗಿ, ಸಾಂಸತಿ ಕ್ರಾಂತಿ ನಡೆಯಬೇಕಿದೆ. ಸಾಂಸತಿಕ ಕಾರ್ಯಕ್ರಮ ಒಂದು ಮಾನಸಿಕ ಕ್ರೀಡೆ, ಇದರಲ್ಲಿ ಎಲ್ಲಾ ಮಕ್ಕಳು ಸಾಂಸತಿಕ ನಾಯಕತ್ವ ವಹಿಸಲಿದ್ದಾರೆ. ಅಧಿಕಾರ ಎಂಬುದು ಅಹಂಕಾರ ಅಲ್ಲ, ಅದೊಂದು ಜವಾಬ್ದಾರಿ. ಇದನ್ನು ಅರ್ಥೈಸಿಕೊಂಡು ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಎಲ್ಲವೂ ಸಮತೋಲನದಿಂದ ಸಾಗುತ್ತದೆ ಎಂದು ಅವರು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಲೆ, ಸಾಹಿತ್ಯ, ಕ್ರೀಡೆ ಇಲ್ಲದ ಜೀವನ ಸತ್ತಂತೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಈ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಭಾಷೆಗಳು, ಸಂಸತಿಗಳು ನಾಶವಾಗುತ್ತಿವೆ, ಇಂದಿನ ಪೀಳಿಗೆಗೂ ನಮಗೂ ಅಜಗಜಾಂತರ ವ್ಯತ್ಯಾಸಗಳು ಕಂಡು ಬರುತ್ತಿದೆ. ಹಾಗಾಗಿ ನಮಗೂ ಇಂದಿನ ಪೀಳಿಗೆಗೂ ಸೇತುವೆ ಕಟ್ಟುವ ಅನಿವಾರ್ಯತೆ ಇದೆ ಎಂದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ, ಪ್ರಾಚಾರ್ಯ ಸಂಘದ ಪ್ರಭಾಕರ್ರೆಡ್ಡಿ, ಡಾ.ಲಕ್ಷ$್ಮಣದಾಸ್, ಬಸವರಾಜು, ಮಹಾಲಿಂಗೇಶ್, ಮಲ್ಲಯ್ಯ, ಡಾ.ಸದಾಶಿವಯ್ಯ, ಚಂದ್ರಶೇಖರ್ ಆರಾಧ್ಯ, ರವಿಕುಮಾರ್, ಗೋವಿಂದರಾಜು ಮತ್ತಿತರರು ಇದ್ದರು.