

ತುಮಕೂರು: ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ಜ್ಞಾನವಿ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಕನಸು ಹೊತ್ತಿರುವ ಜ್ಞಾನವಿ ಮೊದಲಿನಿಂದಲೂ ಓದಿನಲ್ಲಿ ಮುಂದೆ. ಎಲ್‌ಕೆಜಿಯಿಂದ ಕಾಲೇಜು ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಜ್ಞಾನವಿ, ಕಾಲೇಜಿನಲ್ಲಿ ನಿರಂತರ ಟೆಸ್ಟ್, ಪ್ರಿಪ್ರೇಟರಿ ಪರೀಕ್ಷೆಗಳು ಹೆಚ್ಚಿನ ಅಂಕಗಳಿಸಲು, ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಾಧ್ಯವಾಯಿತು ಎನ್ನುತ್ತಾರೆ. ರಾಜ್ಯಕ್ಕೆ ಟಾಪರ್ ಬರುವ ನಿರೀಕ್ಷೆ ಇತ್ತು. ಕೋರ್ ಸಬ್ಜೆಕ್ಟ್‌ನಲ್ಲಿ ನೂರಕ್ಕೆ ನೂರು ಬರುತ್ತೆ. ಇಂಗ್ಲೀಷ್, ಕನ್ನಡದಲ್ಲು ನೂರಕ್ಕೆ ನೂರು ತೆಗೆಯಲು ಉಪನ್ಯಾಸಕರು ಹುರಿದುಂಬಿಸುತ್ತಿದ್ದರು. ಇದು ಇತಿಹಾಸ ನಿರ್ಮಾಣಕ್ಕೆ ಸಾಧ್ಯವಾಯಿತು. ಮೊದಲ ಟಾಪರ್ ಆಗಿರುವುದು ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ. ಸಿಎ ಫೌಂಡೇಷನ್ ಸೇರಿದ್ದೇನೆ. ಇದೇ ಸಂಸ್ಥೆಯಲ್ಲಿ ಬಿ.ಕಾಂ.,ಗೆ ಸೇರುತ್ತೇನೆ. ಸಿಎ ನನ್ನ ಕನಸು ಎನ್ನುತ್ತಾ ಖುಷಿ ಹಂಚಿಕೊಂಡಳು.
ಜ್ಞಾನವಿ ಅಪ್ಪ-ಅಮ್ಮ ಪಿಯುಸಿವರೆಗೆ ಓದಿದ್ದು ಮಕ್ಕಳು ಚೆನ್ನಾಗಿ ಓದಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಮಹದಾಸೆ ಹೊಂದಿದ್ದಾರೆ. ಅದಕ್ಕಾಗಿ ಡಾಬಾ ನಡೆಸುವ ಮಂಜುನಾಥ್, ಮಂಜುಳಾ ದಂಪತಿ ತಮ್ಮ ಮೂವರು ಮಕ್ಕಳ ಶಿಕ್ಷಣಕ್ಕೆ ತಮ್ಮ ದುಡಿಮೆಯ ಎಲ್ಲ ಹಣವನ್ನು ವ್ಯಯಿಸುತ್ತಾ ಬಂದಿದ್ದಾರೆ. ನಮ್ಮ ಮಕ್ಕಳಂತೆ ಗ್ರಾಮೀಣಭಾಗದ ಪ್ರತಿಭಾನ್ವಿತ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಯಾವುದೇ ಸರ್ಕಾರಗಳಾಗಲಿ ಶಿಕ್ಷಣ, ಆರೋಗ್ಯವನ್ನು ಉಚಿತ ಮಾಡಬೇಕು ಎಂಬುದು ಜ್ಞಾನವಿ ತಂದೆ ಮಂಜುನಾಥ್ ಒತ್ತಾಸೆಯಾಗಿದೆ. ಜ್ಞಾನವಿ ಮೂಲತಃ ಮಂಡ್ಯ ಜಿಲ್ಲೆ ಬೀಚನಹಳ್ಳಿಯವರು.