

ಹಾವೇರಿ: ಹಾನಗಲ್ ಉಪಚುನಾವಣೆ ದಿನೇದಿನೆ ರಂಗೇರುತ್ತಿದ್ದು, ಗುರುವಾರ ಬಿಜೆಪಿ ಪರವಾಗಿ ಸಿಎಂ, ಸಚಿವರು ಹಾಗೂ ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವರು ಅಬ್ಬರದ ಪ್ರಚಾರ ನಡೆಸಿದರು. ಬಿಜೆಪಿ ಪರ ಬಸವರಾಜ ಬೊಮ್ಮಾಯಿ ಗುರುವಾರದಿಂದ 2ನೇ ಸುತ್ತಿನಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕಿದರು. ಬೆಳಗ್ಗೆ ವಿವಿಧ ಸಮುದಾಯದವರ ಸಭೆ ನಡೆಸಿ ಮತಬೇಟೆ ನಡೆಸಿ, ಮಧ್ಯಾಹ್ನದಿಂದ ಮಕರವಳ್ಳಿ, ಹೊಂಕಣ, ಬ್ಯಾಗವಾದಿ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಪ್ರಚಾರದ ಉದ್ದಕ್ಕೂ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡುತ್ತ ಸಾಗಿದರು. ಜನರ ಬಳಿ ಮತ ಕೇಳಲು ಯಾವುದೇ ಸರಕು ಇಲ್ಲದಿರುವುದರಿಂದ ಕಾಂಗ್ರೆಸ್ನವರು ಆರ್ಎಸ್ಎಸ್, ಪ್ರಧಾನಿ ಮೋದಿ ವಿರುದ್ಧ ಟೀಕೆಗೆ ಇಳಿದಿದೆ ಎಂದು ಸಿಎಂ ಆರೋಪಿಸಿದರು.
ಸಿಎಂ ಹೊರತುಪಡಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ದ್ಯಾಮನಕೊಪ್ಪ, ಮಾವಕೊಪ್ಪ, ಶಿರಗೋಡ, ಜಂಗಿನಕೊಪ್ಪ, ಮುಡೂರ ಗ್ರಾಮಗಳಲ್ಲಿ ಪ್ರಚಾರ ನಡೆಸಿದರೆ, ತೋಟಗಾರಿಕೆ ಸಚಿವ ಮುನಿರತ್ನ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಕಾಂಗ್ರೆಸ್ ಎರಡು ದೋಣಿಗಳ ಪಕ್ಷ ಎಂದರು. ನಂತರ ಅಕ್ಕಿಆಲೂರ ಜಿಪಂ ಭಾಗದಲ್ಲಿ ಮನೆಮನೆ ಪ್ರಚಾರ ನಡೆಸಿದರು. ಆರೋಗ್ಯ ಸಚಿವ ಕೆ.ಸುಧಾಕರ್ ಹಾನಗಲ್ಲ ಪಟ್ಟಣದಲ್ಲಿ ಪ್ರಚಾರ ಹಾಗೂ ಸಿಎಂ ಜತೆಗೆ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಶಾಸಕ ರಾಜುಗೌಡ, ಸಂಸದ ಶಿವಕುಮಾರ ಉದಾಸಿ ಇತರರು ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವರ್ ಚಿಕ್ಕಾಂಶಿ, ಹೊಸೂರ, ಹುಲ್ಲತ್ತಿ ಗ್ರಾಮದಲ್ಲಿ ಮತ ಪ್ರಚಾರ ನಡೆಸಿ, ‘ಸರ್ಕಾರದ 5-6 ಸಚಿವರು ಮತದಾರರಿಗೆ ಹಂಚಲು ಹಣದ ಚೀಲವನ್ನು ಹೊತ್ತು ತಂದಿದ್ದಾರೆ. ಅವರ ನೋಟು ಪಡೆದು ಕಾಂಗ್ರೆಸ್ಗೆ ಮತ ಹಾಕಿ’ ಎಂದು ಮನವಿ ಮಾಡಿದ್ದು ಗಮನ ಸೆಳೆಯಿತು. ಇವರಿಗೆ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇತರರು ಸಾಥ್ ನೀಡಿದರು. ಇನ್ನು ಜೆಡಿಎಸ್ನಿಂದ ಈವರೆಗೂ ಯಾವುದೇ ರಾಜ್ಯಮಟ್ಟದ ನಾಯಕರು ಪ್ರಚಾರಕ್ಕೆ ಆಗಮಿಸಿಲ್ಲ. ಅ. 23ರಂದು ಕುಮಾರಸ್ವಾಮಿ ಬರಲಿದ್ದಾರೆ. ಅಲ್ಲಿಯವರೆಗೆ ಅಭ್ಯರ್ಥಿ ಸ್ಥಳೀಯ ನಾಯಕರೊಂದಿಗೆ ಮನೆಮನೆ ಭೇಟಿ ನಡೆಸಿದ್ದಾರೆ.
ಸಿಂದಗಿ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ದೇಶವನ್ನು ಹಾಳು ಮಾಡುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಗುರುವಾರ ಆಲಮೇಲದಲ್ಲಿ ಮಾತನಾಡಿದ ಅವರು, ಎರಡೂ ಪಕ್ಷಗಳಿಂದಾಗಿ ದೇಶದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸಿಂದಗಿ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನುಡಿದಂತೆ ನಡೆದುಕೊಂಡಿಲ್ಲ. ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ಕೊಡದೆ ಅಲ್ಪಸಂಖ್ಯಾತರನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಹರಿಹಾಯ್ದರು. ಎಚ್ಡಿಕೆ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಆಲಮೇಲದಲ್ಲಿ ಸಂಚರಿಸಿ ಮತಯಾಚಿಸಿದರು.
ವಿಜಯಪುರ: ಹಣ ಹಂಚಿ ಅಧಿಕಾರಕ್ಕೆ ಬಂದವರು ಕಾಂಗ್ರೆಸ್ನವರು. ಇನ್ಮುಂದೆ ಹಣ ಹಂಚಿ ಅಧಿಕಾರಕ್ಕೆ ಬರಲಾಗಲ್ಲ ಎಂಬುದು ಗೊತ್ತಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು. ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಮತದಾರರಿಗೆ ತಲಾ 2 ಸಾವಿರ ರೂ. ಹಂಚಿಕೆ ಮಾಡುತ್ತಿದ್ದಾರೆಂಬ ಸಿದ್ದರಾಮಯ್ಯ ಆರೋಪಕ್ಕೆ ಬಿಎಸ್ವೈ ಪ್ರತಿಕ್ರಿಯಿಸಿದರು. ಸ್ವಾತಂತ್ರ್ಯ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಸ್ವಾತಂತ್ರ್ಯ ನಂತರ ವಿಸರ್ಜನೆ ಮಾಡಿ ಎಂದಿದ್ದರು. ಆದರೆ ಅವರ ಮಾತು ಧಿಕ್ಕರಿಸಿ ರಾಜಕೀಯ ಲಾಭಕ್ಕೆ ಬಳಸಿಕೊಂಡು ದೇಶವನ್ನು ದುಸ್ಥಿತಿಗೆ ತಂದಿದ್ದಾರೆ ಎಂದು ತಾಂಬಾದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಜನತಾ ಪಕ್ಷಕ್ಕೆ ಜಯವಾಗಲಿ!: ಸಮಾವೇಶದಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ ಭಾಷಣದ ಆರಂಭದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜಯವಾಗಲಿ ಎನ್ನುವ ಬದಲು ಜನತಾ ಪಕ್ಷಕ್ಕೆ ಜಯವಾಗಲಿ ಎಂದು ಬಿಟ್ಟರು. 2-3 ಬಾರಿ ಇದೇ ಪದ ಪುನರುಚ್ಚರಿಸುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಆಕ್ರೋಶ ಭರಿತರಾಗಿ ‘ಏ ಭಾರತೀಯ ಜನತಾ ಪಕ್ಷಕ್ಕೆ’ ಅಂತ ಹೇಳು ಎಂದ ನಂತರ ಅವರು ಸುಧಾರಿಸಿಕೊಂಡರು.
ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸೂಚನೆ ಮೇರೆಗೆ ಪ್ರಮುಖ ಶಾಸಕರು ಉಪ ಚುನಾವಣಾ ಪ್ರಚಾರಕ್ಕೆ ತೊಡಗಿಸಿಕೊಳ್ಳಲು ಸಿಂದಗಿಯತ್ತ ಮುಖ ಮಾಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಜತೆಗೆ ಬೆಂಗಳೂರು ಮತ್ತು ತುಮಕೂರು ಭಾಗದ ಕೆಲ ಶಾಸಕರು, ಮಾಜಿ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಸನ ಮತ್ತು ಮಂಡ್ಯ ಜಿಲ್ಲೆಯ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಕಾರ್ಯ ಯೋಜನೆ ರೂಪಿಸಿ ಕೊಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಆಪ್ತರನ್ನು ಸಂರ್ಪಸಿದ್ದಾರೆ. ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ಸತತ ಪ್ರಯತ್ನ ಹಾಕಲಾಗುತ್ತಿದ್ದು, ಅಲ್ಪಸಂಖ್ಯಾತರ ಮತಗಳನ್ನು ಗಣನೀಯವಾಗಿ ಸೆಳೆಯಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಭದ್ರ ನೆಲೆ ಇರುವ ಕಾರಣ ಗೆಲುವಿನ ಗೆರೆ ದಾಟಲು ಕಷ್ಟವಾಗಲಾರದು ಎನ್ನುವುದು ದಳಪತಿಗಳ ಲೆಕ್ಕಾಚಾರ.
ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ಬಿಜೆಪಿ, ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಏನೇ ಮಾಡಿದರೂ ಕೊನೆಗೆ ಬಿಜೆಪಿ ಜತೆ ಸೇರಿಕೊಳ್ಳುತ್ತಾರೆ. ಜೆಡಿಎಸ್ನವರಿಗೆ ಯಾವುದೇ ಸಿದ್ದಾಂತವಿಲ್ಲ. ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ಮಾಡಿದ ಮೇಲೂ ಜೆಡಿಎಸ್ನವರು ಹೇಗೆ ಸೆಕ್ಯುಲರ್ ಆಗಿರಲು ಸಾಧ್ಯ? ಅವರಿಗೆ ಅಲ್ಪಸಂಖ್ಯಾತರು ಏಕೆ ಮತ ನೀಡುತ್ತಾರೆ. ಪ್ರಾದೇಶಿಕ ಪಕ್ಷ ನಿಜ. ಆದರೆ ಜಾತ್ಯಾತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿಯೂ ಜಾತ್ಯಾತೀತ ಅಲ್ಲ, ಕೋಮುವಾದಿ. ಆಚಾರದಲ್ಲಿಯೂ ಜೆಡಿಎಸ್ ಕೋಮುವಾದಿ ಪಕ್ಷ ಎಂದು ಕಿಡಿಕಾರಿದರು.
ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ ಅಷ್ಟೇ ಎಂದ ಸಿದ್ದರಾಮಯ್ಯ, ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣ ಹೊಳೆ ಹರಿಸುತ್ತಿ್ತ್ದರೆ. ಒಂದು ವೋಟಿಗೆ 2000 ರೂ. ಕೊಡುತ್ತಿ್ತ್ದರೆ ಅಂತ ಸುದ್ದಿ ಇದೆ. ಏನು ಕೆಲಸ ಮಾಡಿದ್ದಾರೆ ಅಂತ ಬಿಜೆಪಿಯವರು ಜನರ ಮುಂದೆ ನಿಂತು ಮತ ಕೇಳ್ತಾರೆ? ಎಂದು ಟೀಕಿಸಿದರು.
ತಿರುಗಿ ಬೀಳಬೇಕು: ಜನ ಸಹಿಸಿಕೊಳ್ಳುವ ವರೆಗೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರಗಳನ್ನು ಹೆಚ್ಚಿಸುತ್ತಲೇ ಇರುತ್ತದೆ. ಇದರ ವಿರುದ್ಧ ಜನ ತಿರುಗಿಬಿದ್ದು ಪ್ರತಿಭಟನೆ ನಡೆಸಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು. ರಾಜ್ಯದ ಬಿಜೆಪಿಗೆ ಧಂ ಇಲ್ಲ. ಅನುದಾನವನ್ನು ನಾವು ದೆಹಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ? ಧಂ ಇದ್ದಿದ್ರೆ ಪ್ರಧಾನಿ ಕಚೇರಿ ಮುಂದೆ 25 ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು ಎಂದರು.