

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘ ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಈಡೇರಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ವ್ಯಾಟ್ ಮತ್ತು ಜಿಎಸ್ಟಿ ನಡುವಿನ ವ್ಯತ್ಯಾಸ, ನವೀಕರಣ ವಿಸ್ತರಣೆ ಸೇರಿ ಶೇ.90 ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಆದೇಶ ಹೊರಡಿಸಲು ಇಲಾಖೆ ಒಪ್ಪಿಗೆ ನೀಡಿದೆ.
ಆ.7ರಂದು ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಗುತ್ತಿಗೆದಾರರ ಕುಂದುಕೊರತೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಇಲಾಖೆಯಲ್ಲಿ ಬಾಕಿ ಬಿಲ್ಗಳಿಗೆ ಹಣ ಪಾವತಿ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಂಘದ ಪದಾಧಿಕಾರಿಗಳು, ಸಚಿವರ ಗಮನಕ್ಕೆ ತಂದಿದ್ದರು. ಗುತ್ತಿಗೆದಾರರ ಅಹವಾಲು ಆಲಿಸಿದ ಸಚಿವರು ಇವುಗಳನ್ನು ಈಡೇರಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಆದಿತ್ಯ ಆಮ್ಲನ್ ಬಿಸ್ವಾಸ್, ಕಾರ್ಯದರ್ಶಿ ಸತ್ಯನಾರಾಯಣ ಸೇರಿ ಇತರ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಹಂತ ಹಂತವಾಗಿ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಸತೀಶ ಜಾರಕಿಹೊಳಿ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಗುತ್ತಿಗೆದಾರರಿಗೆ ಒಟ್ಟು 20,309 ಕೋಟಿ ರೂ.ಪಾವತಿಸಲಾಗಿದೆ. ಇದರಲ್ಲಿ ಕೆಆರ್ಡಿಸಿಎಲ್, ಕೆಶಿಪ್, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿ ಬಿಲ್ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಇಲಾಖೆಯಲ್ಲಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಪೈಕಿ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಲಾಗುತ್ತಿದೆ. ದೊಡ್ಡ ಗುತ್ತಿಗೆದಾರರ ಬಿಲ್ಗಳನ್ನು ಉಳಿದ ಮೊತ್ತದಲ್ಲಿ ಪಾವತಿಸಲಾಗುತ್ತಿದೆ ಎಂದರು.
ಕಾಮಗಾರಿಗಳ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗುತ್ತಿಗೆದಾರರ ಸಮಸ್ಯೆಗಳನ್ನು ಬೇಗನೆ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.