ಸ್ಥಳೀಯ ಸಮಸ್ಯೆಗಳಿಗೆ ಪರಹಾರ ಜನಸ್ಪಂದನ

FotoJet (1)
Published on

ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಬಿಡದಿ : ಗ್ರಾಮಸಭೆಗಳು ಕೇವಲ ಕಾಟಾಚಾರದ ಸಭೆಗಳಾಗದೆ, ಜನಸಾಮಾನ್ಯರಲ್ಲಿ ವಿಶ್ವಾಸ ಹಾಗೂ ಗೌರವ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಗ್ರಾಮಕ್ಕೆ ಕರೆತಂದು ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ನಿವಾರಿಸಿಕೊಡುವುದೇ ಜನಸಂಪರ್ಕ ಸಭೆಯ ಉದ್ದೇಶವಾಗಿದೆ ಎಂದರು.

ಗ್ರಾಪಂ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಾಗಾಗಿ ತಹಸೀಲ್ದಾರ್ ಹಾಗೂ ತಾಪಂ ಇಒ ಅವರು ಗ್ರಾಮೀಣ ಪ್ರದೇಶದ ಕಡೆಗೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಬೇಕಿದೆ. ಜನರ ಸಮಸ್ಯೆ ಕೇಳಲು ಶಾಸಕರೆ ಸಭೆ ಮಾಡಬೇಕಿಲ್ಲ. ಗ್ರಾಮಪಂಚಾಯಿತಿಮಟ್ಟದಲ್ಲಿ ಸಭೆ ಮಾಡಿ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿ. ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳು ಸರ್ಕಾರ ಹಾಗೂ ಆಯಾಯ ಇಲಾಖೆಗಳ ಹಿರಿಯ ಅಧಿಕಾರಿಗಳ ಮಟ್ಟದ ಗಮನಕ್ಕೆ ತನ್ನಿ ಎಂದರು.

ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ನಕಾಶೆ ರಸ್ತೆ ಬಂದ್ ಮಾಡಿ ಅಕ್ರಮವಾಗಿ ಖಾಸಗಿಯವರು ಲೇಔಟ್ ಮಾಡುತ್ತಿದ್ದಾರೆ ಎಂದು ಆ ಗ್ರಾಮದ ಹಲವರು ಶಾಸಕರ ಗಮನಕ್ಕೆ ತಂದರು. ತಕ್ಷಣ ಶಾಸಕ ಬಾಲಕೃಷ್ಣ ಅವರು, ರಾಜಸ್ವ ನಿರೀಕ್ಷಕರನ್ನು ಕರೆದು, 30 ಅಡಿ ರಸ್ತೆ ಇಲ್ಲದೆ ಹೇಗೆ ಖಾಸಗಿಯವರು ಲೇಔಟ್ ಮಾಡುತ್ತಿದ್ದಾರೆ. ಅವರಿಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ತರಾಟೆ ತೆಗೆದುಕೊಂಡರು. ಕೂಡಲೇ ಅವರಿಗೆ ನೋಟಿಸ್ ನೀಡಿ ಕೆಲಸ ನಿಲ್ಲಿಸಿ, ನಕಾಶೆ ರಸ್ತೆ ತೆರವು ಮಾಡಿಸುವಂತೆ ತಾಕೀತು ಮಾಡಿದರು.

ಕಂದಾಯ ಗ್ರಾಮ ೋಷಣೆ

ಗ್ರಾಮದ ಹೊರಗೆ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಇ-ಸ್ವತ್ತು, ವಿದ್ಯುತ್ ಪೂರೈಕೆ ಸೇರಿ ಹಲವು ಸಮಸ್ಯೆಗಳಿವೆ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಈ ವೇಳೆ 50 ಮನೆಗಳ ಒಳಗೆ ಇದ್ದರೆ ಅದನ್ನು ಉಪ ಗ್ರಾಮವೆಂದು ಮಾಡಬಹುದಾಗಿದೆ. 50ಕ್ಕಿಂತ ಹೆಚ್ಚು ಮನೆಗಳು ಇದ್ದರೆ ಕಂದಾಯ ಗ್ರಾಮ ಎಂದು ಘೋಷಣೆ ಮಾಡಬಹುದು. ಈ ನಿಟ್ಟಿನಲ್ಲಿ ಬೈರಮಂಗಲ ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಕರೆಯಬಹುದು. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನಕೊಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು.

‘ನೀವು ಏನ್ ಕೆಲಸ ಮಾಡುತ್ತಿದ್ದೀರಿ?

ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆ ಸಂಪೂರ್ಣ ಕಳಪೆಯಿಂದ ಕೂಡಿರುವ ಬಗ್ಗೆ ಹಲವು ಗ್ರಾಮಗಳ ಜನರು ಶಾಸಕರಿಗೆ ದೂರು ನೀಡಿದರು. ಬೈರಮಂಗಲ ಗ್ರಾಮದಲ್ಲೇ ಕೆಲವೆಡೆ ಅರ್ಧಂಬರ್ಧ ಕಾಮಗಾರಿ ಮಾಡಿ, ಗುಂಡಿ ಅಗೆದು ಬಿಟ್ಟಿದ್ದಾರೆ. ಇನ್ನೂ ಹಲವು ಕಡೆ ಓವರ್ ಹೆಡ್ ಟ್ಯಾಂಕ್‌ಗಳ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದರು. ಇದರಿಂದ ಸಿಟ್ಟಿಗೆದ್ದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ‘ನೀವು ಏನ್ ಕೆಲಸ ಮಾಡುತ್ತಿದ್ದೀರಿ?, ಕಚೇರಿಯಲ್ಲಿ ಕುಳಿತುಕೊಂಡರೆ ಕೆಲಸ ಆಗಲ್ಲ. ಕಾಮಗಾರಿ ಪೂರ್ಣ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಬ್ಲಾಕ್ ಲೀಸ್ಟ್‌ಗೆ ಹಾಕಿಸಿ. ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಸಭೆ ಕರೆಯಿರಿ ಎಂದು ಸೂಚಿಸಿದರು.

ತಡವಾಗಿ ಬಂದ ಅಧಿಕಾರಿಗೆ ವಾರ್ನಿಂಗ್

ಜನ ಸಂಪರ್ಕ ಸಭೆಗೆ ತಡವಾಗಿ ಆಗಮಿಸಿದ ಆಹಾರ ನಿರೀಕ್ಷಕರನ್ನು ವೇದಿಕೆ ಮೇಲೆ ಕರೆದು ಹೂವಿನ ಹಾರ ಹಾಕಿ ಸ್ವಾಗತ ಮಾಡಿದ ಪ್ರಸಂಗ ನಡೆಯಿತು. ಸಭೆ ಪ್ರಾರಂಭವಾದ ವೇಳೆ ಕೆಲವರು ಆಹಾರ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಶಾಸಕರ ಕೈಗೆ ನೀಡಿದ್ದರು. ಆದರೆ ಇಲಾಖೆ ಅಧಿಕಾರಿ ಸಭೆ ಮುಗಿಯುತ್ತಿದ್ದಾಗ ಆಗಮಿಸಿದ್ದರಿಂದ ಶಾಸಕ ಬಾಲಕೃಷ್ಣ ಅವರು, ಅಧಿಕಾರಿಯನ್ನು ವೇದಿಕೆಗೆ ಕರೆದು, ಹೂವಿನ ಹಾರ ಹಾಕಿ ‘ನಾನೇನು ಕೆಲಸವಿಲ್ಲದೆ ಸಭೆ ಕರೆದಿದ್ದೀನಾ? ಸಭೆಗೆ ಕರೆದ ಮೇಲೆ ನಿಗದಿತ ಅವಧಿಗೆ ಬರಬೇಕಲ್ವಾ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net