ಹೆದ್ದಾರಿ ಕಾಮಗಾರಿ ಯಥಾಸ್ಥಿತಿ ಮುಂದುವರಿಕೆ : ಸಾರ್ವಜನಿಕ ಸಭೆಯಲ್ಲಿ ಮಾಹಿತಿ

nh road
ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಕುರಿತು ನೆಲ್ಯಾಡಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು.
Published on

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಸ್ಥಗಿತಗೊಂಡಿರುವ ಮೇಲ್ಸೇತುವೆ ಕಾಮಗಾರಿ ಪುನರಾರಂಭಿಸುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕ ಸಭೆ ನೆಲ್ಯಾಡಿಯಲ್ಲಿ ನಡೆಯಿತು.

ಸಭೆಗೆ ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ವಿವೇಕಾನಂದ ಮಠಪತಿ, ನೆಲ್ಯಾಡಿ ಪೇಟೆಯಲ್ಲಿ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಮನವಿಯಂತೆ ಸಲ್ಲಿಸಿರುವ ಎರಡೂ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ. ಪೆರಿಯಶಾಂತಿಯಿಂದ ಬಿ.ಸಿ.ರೋಡ್ ತನಕದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಕಂಪನಿ ಈ ವರ್ಷದ ಡಿಸೆಂಬರ್ ತಿಂಗಳ ಒಳಗೆ ಮುಗಿಸಿಕೊಡಬೇಕಾಗಿದೆ.

ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಇದಕ್ಕೆ ನೆಲ್ಯಾಡಿಯ ವರ್ತಕರು, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರಾದ ಕೆಎನ್‌ಆರ್ ಸಂಸ್ಥೆ ಹಾಗೂ ನೆಲ್ಯಾಡಿ ವರ್ತಕರು, ನಾಗರಿಕರು ಜತೆಯಾಗಿ ದ.ಕ.ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಕ್ಯಾ.ಬ್ರಿಜೇಶ್ ಚೌಟರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ಕ್ರಮಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪ್ಪಿನಂಗಡಿ ಪಿಎಸ್‌ಐ ಅವಿನಾಶ್ ಎಚ್. ಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್, ಕೆಎನ್‌ಆರ್ ಕಂಪನಿಯ ಮಹೇಂದ್ರ ಸಿಂಗ್, ರಘುನಾಥ ರೆಡ್ಡಿ, ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು, ವರ್ತಕರು, ಜಿಪಂ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲ್, ಪಿ.ಪಿ.ವರ್ಗಿಸ್, ಕೆ.ಪಿ.ತೋಮಸ್, ನಿವೃತ್ತ ಸೈನಿಕ ಒ.ಜಿ.ನೈನನ್, ಬೆಥನಿ ವಿದ್ಯಾಸಂಸ್ಥೆಯ ಡಾ.ವರ್ಗಿಸ್ ಕೈಪನಡುಕ, ಆಟೋ ಚಾಲಕ- ಮಾಲೀಕ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net