ಬಳಕೆಸ್ನೇಹಿ ಅಲ್ಲದ ಕೆಂಗೇರಿ ಸ್ಕೈವಾಕ್! ಇದ್ದೂ ಇಲ್ಲದಂತಿದೆ ಪಾದಚಾರಿ ಮೇಲ್ಸೇತುವೆ

Kengeri Skywalk
Published on

ರಾಮ ಕಿಶನ್​ ಕೆ.ವಿ. ಬೆಂಗಳೂರು
ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ದಾಟುವುದರಿಂದ ಅಪಘಾತಗಳಾಗಿ ಪಾದಚಾರಿಗಳ ಸಾವಿನ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇವೆ. ಇಂತಹ ದುರ್ಟನೆಗಳನ್ನು ತಡೆಯುವ ಉದ್ದೇಶದಿಂದಲೇ ಸ್ಕೈವಾಕ್​ಗಳನ್ನು ಅಲ್ಲಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಜನರ ಅನುಕೂಲಕ್ಕಾಗಿ ನಗರದಲ್ಲಿ ನಿರ್ಮಾಣ ಮಾಡಿರುವ ಸ್ಕೈವಾಕ್​ಗಳನ್ನು ಬಳಸಲು ಜನರೇ ಹಿಂದೇಟು ಹಾಕುತ್ತಿದ್ದಾರೆ. ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಎಂಟಿಸಿ ಸಾರಿಗೆ ಸಂಕೀರ್ಣ ಮುಂಭಾಗದಲ್ಲಿರುವ ಸ್ಕೈವಾಕ್​ ಪರಿಸ್ಥಿತಿಯೂ ಇದೇ ಆಗಿದೆ.

ಬೆಂಗಳೂರು ಟ್ರಾಫಿಕ್​ ಪೊಲೀಸರ ಅಂಕಿ-ಅಂಶಗಳ ಪ್ರಕಾರ, 2021ರಲ್ಲಿ 161 ಪಾದಚಾರಿಗಳು ಮೃತಪಟ್ಟಿದ್ದಾರೆ. 2023ರ ವೇಳೆಗೆ ಈ ಸಂಖ್ಯೆ 286ಕ್ಕೆ ಏರಿಕೆಯಾಗಿದೆ. 2023ರಲ್ಲಿ ನಗರದಲ್ಲಿ ಸಂಭವಿಸಿದ ಅಪಘಾತಗಳಿಂದ ಅಂದಾಜು ಶೇ.40 ಪಾದಚಾರಿ ಸಾವುಗಳು ಸಂಭವಿಸಿವೆ. ಅಡ್ಡಾದಿಡ್ಡಿಯಾಗಿ ರಸ್ತೆ ದಾಟುವುದರಿಂದ ಇಂತಹ ಪ್ರಮಾದಗಳಾಗುತ್ತಿವೆ ಎಂದು ಪೊಲೀಸರು ಎಚ್ಚರಿಸುತ್ತಿದ್ದರೂ ಸಾರ್ವಜನಿಕರು ಉದಾಸೀನ ಧೋರಣೆ ಮುಂದುವರಿಸಿದ್ದಾರೆ.

ಕೆಂಗೇರಿ ಬಸ್​ ಟರ್ಮಿನಲ್​ ಮುಂಭಾಗ ಸ್ಕೈವಾಕ್​ ಅನ್ನು ಉತ್ತಮ ದರ್ಜೆಯಲ್ಲಿ ನಿರ್ಮಿಸಲಾಗಿದೆ. ಹೀಗಿದ್ದರೂ ಜನರು ಮಾತ್ರ ಇದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯರಸ್ತೆಯ ಡಿವೈಡರ್​ ದಾಟಿಕೊಂಡೇ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಚಲ್ಲಘಟ್ಟ ಮಾರ್ಗವಾಗಿ ಬರುವ ಬಿಎಂಟಿಸಿ ಬಸ್ಸುಗಳು ಮಾರ್ಗಮಧ್ಯೆಯೇ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುತ್ತಿವೆ. ಈ ಬಸ್ಸುಗಳಲ್ಲಿ ಸಾಕಷ್ಟು ಜನರು ಮೈಸೂರು ಕಡೆಗೆ ಬಸ್ಸಿನಲ್ಲಿ ತೆರಳುವವರು ಇರುತ್ತಾರೆ. ಈ ಪ್ರಯಾಣಿಕರಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯವಾಗುವಂತೆ ಪಕ್ಕದಲ್ಲೇ ಸ್ಕೈವಾಕ್​ ನಿರ್ಮಿಸಲಾಗಿದೆ. ಇದು ಪಕ್ಕದ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುತ್ತದೆ. ಆದರೆ, ಜನರು ಮಾತ್ರ ವೇಗವಾಗಿ ಸಂಚರಿಸುವ ವಾಹನಗಳ ನಡುವೆಯೇ ಅಡ್ಡದಿಡ್ಡಿಯಾಗಿ ರಸ್ತೆ ದಾಟುತ್ತಿದ್ದಾರೆ.

ಸಲಹೆ ಏನು?

  • ಟರ್ಮಿನಲ್​ ನಿಲ್ದಾಣದ ಮುಂಭಾಗ ಕಡ್ಡಾಯವಾಗಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು.
  • ರಸ್ತೆ ದಾಟುವವರನ್ನು ತಡೆದು ಸ್ಕೈವಾಕ್​ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು.
  • ಜನರು ರಸ್ತೆ ದಾಟಲು ಅವಕಾಶವನ್ನೇ ಕೊಡದಂತೆ ಎತ್ತರದ ಸ್ಟೀಲ್​ ರೇಲಿಂಗ್​ ಅಳವಡಿಸಬೇಕು.
  • ಸ್ಕೈವಾಕ್​ ಪಕ್ಕದಲ್ಲೇ ಬಸ್​ ನಿಲ್ಲಿಸುವಂತೆ ಬಿಎಂಟಿಸಿ ಚಾಲಕರಿಗೆ ಸೂಚಿಸಬೇಕು.

ಅಪಾಯ ತಂದೊಡ್ಡುತ್ತಿದೆ

ಮೈಸೂರಿಗೆ ತೆರಳುವ ಬಸ್ಸುಗಳಿಗೆ ಈ ಪ್ರದೇಶ ತಾತ್ಕಾಲಿಕ ನಿಲ್ದಾಣವಾಗಿ ಬದಲಾಗಿದ್ದು, ಪ್ರಯಾಣಿಕರನ್ನು ಹತ್ತಿಸುವ&ಇಳಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಬಸ್ಸುಗಳನ್ನು ಹತ್ತಲು ಏಕಾಏಕಿ ಜನರು ಡಿವೈಡರ್​ ದಾಟಿ ಬರುತ್ತಿರುತ್ತಾರೆ. ಪರಿಣಾಮ ಸ್ಕೈವಾಕ್​ ಉಪಯೋಗಿಸುವವರ ಸಂಖ್ಯೆ ಕಡಿಮೆಯಿದ್ದು, ಅತಿವೇಗವಾಗಿ ವಾಹನಗಳು ಸಾಗುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸುತ್ತಿಲ್ಲ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ತಪ್ಪಿದ್ದಲ್ಲ ಎನ್ನುವಂತಾಗಿದೆ.

ವಾಹನದಟ್ಟಣೆ ಏಕೆ?

ನಗರದಿಂದ ರಾಮೋಹಳ್ಳಿ, ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರಿಗೆ ತೆರಳುವವರು ಕೆಂಗೇರಿ ಮಾರ್ಗ ಬಳಸಬೇಕಿದೆ. ಹೀಗಾಗಿ ಈ ರಸ್ತೆಯಲ್ಲಿ ಬಸ್ಸು, ಕಾರು, ಲಾರಿ ಸೇರಿ ಎಲ್ಲ ಮಾದರಿಯ ವಾಹನಗಳು ಸಂಚರಿಸುತ್ತಿರುತ್ತವೆ. ಜತೆಗೆ ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿಗೆ ತೆರಳುವವರು ಕೂಡ ಇದೇ ರಸ್ತೆಯನ್ನು ಬಳಸುತ್ತಾರೆ. ಅಲ್ಲದೆ ಈ ಮಾರ್ಗದಲ್ಲಿ ಮುಂದಕ್ಕೆ ಚಲಿಸಿದರೆ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಸಿಗುವುದರಿಂದ ಎಲ್ಲ ಹೊತ್ತಿನಲ್ಲೂ ವಾಹನದಟ್ಟಣೆ ಇದ್ದೇ ಇದೆ.

ಅಸಹಾಯಕರಾಗಿದ್ದೇವೆ!

ನಿತ್ಯ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ಪ್ರದೇಶ ಇದಾಗಿದೆ. ಸಾರ್ವಜನಿಕರಿಗೆ ಸಹಕಾರಿಯಾಗಲೆಂದು ಸ್ಕೈವಾಕ್​ ನಿರ್ಮಿಸಲಾಗಿದೆ. ಎಷ್ಟು ಬಾರಿ ಸೂಚನೆ ನೀಡಿದರೂ ಜನರು ಮಾತ್ರ ರಸ್ತೆ ದಾಟಿಯೇ ಬರುತ್ತಿದ್ದಾರೆ. ಹೀಗಾದಾಗ ವೇಗವಾಗಿ ಬರುತ್ತಿರುವ ವಾಹನಗಳು ಏಕಾಏಕಿ ಬ್ರೇಕ್​ ಹಾಕುತ್ತವೆ. ಇದರಿಂದ ವಾಹನದಟ್ಟಣೆಯೂ ಹೆಚ್ಚುತ್ತದೆ. ಜತೆಗೆ ಅಪಘಾತ ಸಂಭವಿಸುವ ಸಂದರ್ಭವೂ ಎದುರಾಗುತ್ತದೆ. ಇದನ್ನು ತಪ್ಪಿಸಲು ಸದಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಕೆಂಗೇರಿ ಬಸ್​ ಟರ್ಮಿನಲ್ ನಿಲ್ದಾಣ ವ್ಯಾಪ್ತಿಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪಾದಚಾರಿಗಳು ರಸ್ತೆ ದಾಟಲು ಸ್ಕೈವಾಕ್ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ವಾಹನಗಳ ನಡುವೆ ಅಡ್ಡದಿಡ್ಡಿಯಾಗಿ ರಸ್ತೆ ದಾಟುತ್ತಾರೆ. ಇದರಿಂದಾಗ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಏಕಾಏಕಿ ಬ್ರೇಕ್​ ಹಾಕಿ ಕೆಲ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದಿ ಉದಾಹರಣೆಗಳೂ ಇವೆ.
> ಸಂತೋಷ್​, ಸ್ಥಳಿಯ ನೌಕರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net