ಬೆಳಾಳ್ಳೆ ಗ್ರಾಮದಲ್ಲಿ ಸಾರ್ವಜನಿಕ ಸಂತೆಗೆ ಚಾಲನೆ

ಬೆಳಾಳ್ಳೆ ಗ್ರಾಮದಲ್ಲಿ ಸಾರ್ವಜನಿಕ ಸಂತೆಗೆ ಚಾಲನೆ
Published on

ಪಾಂಡವಪುರ: ತಾಲೂಕಿನ ಬೆಳಾಳ್ಳೆ ಗ್ರಾಮದಲ್ಲಿ ಹೊಸದಾಗಿ ಸಾರ್ವಜನಿಕರ ಸಂತೆ ಆರಂಭಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಗ್ರಾಮದ ಹೇಮಾವತಿ ಕ್ವಾಟ್ರರ್ಸ್ ಆವರಣದಲ್ಲಿ ಖಾಲಿ ಇದ್ದ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿ, ವ್ಯಾಪಾರಸ್ಥರು ಮತ್ತು ರೈತರಿಗೆ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳ ವ್ಯವಸ್ಥೆಯೊಂದಿಗೆ ಶುಕ್ರವಾರ ಸಂತೆ ಪ್ರಾರಂಭಿಸಲಾಯಿತು.

ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬೆಳಾಳ್ಳೆ ಗ್ರಾಮದಲ್ಲಿ ಸಾರ್ವಜನಿಕ ಸಂತೆ ಪ್ರಾರಂಭವಾದ್ದರಿಂದ ಮಾಣಿಕ್ಯನಹಳ್ಳಿ, ಹಳೆಬೀಡು, ನಾರಾಯಣಪುರ, ಲಕ್ಷ್ಮೀಸಾಗರ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳ ರೈತರಿಗೆ ಈ ಸಂತೆಯಿಂದ ಅನುಕೂಲವಾಗಲಿದೆ. ಈ ಭಾಗದ ರೈತರು ಹೇಮಾವತಿ ಮತ್ತು ಕೊಳವೆ ಬಾವಿ ನೀರಿನ ಆಶ್ರಯದಲ್ಲಿ ಅತಿಹೆಚ್ಚು ತರಕಾರಿ, ಸೊಪ್ಪು ಹಾಗೂ ಹೂವನ್ನು ಹೆಚ್ಚಾಗಿ ಬೆಳೆಯುವುದರಿಂದ ಮಧ್ಯವರ್ತಿಗಳ ಕಾಟವಿಲ್ಲದೆ ತಾವು ಬೆಳೆದ ಬೆಳೆಯನ್ನು ನೇರವಾಗಿ ಸಂತೆಯಲ್ಲಿ ಮಾರಾಟ ಮಾಡಲು ಅವಕಾಶವಾಗಲಿದೆ. ಜತೆಗೆ ಈ ಸಂತೆಯಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಅನುಕೂಲ ಪಡೆಯಲಿದ್ದಾರೆ.

ಈ ಭಾಗದ ಸುತ್ತಮುತ್ತಲ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಸಂತೆಗಾಗಿ ಪ್ರತಿ ಸೋಮವಾರ ನಡೆಯುವ ಜಕ್ಕನಹಳ್ಳಿ ಸಂತೆ ಅಥವಾ ಪಾಂಡವಪುರ ಪಟ್ಟಣದಲ್ಲಿ ಗುರುವಾರ ನಡೆಯುವ ಸಂತೆಯಲ್ಲಿ ಮಾರಾಟ ಮತ್ತು ಖರೀದಿ ಮಾಡಬೇಕಾಗಿತ್ತು. ಆದರೆ, ಈ ಭಾಗದಲ್ಲೇ ಸಂತೆ ಪ್ರಾರಂಭವಾಗಿರುವ ಕಾರಣ ರೈತರಿಗೆ ಅನುಕೂಲವಾಗಲಿದೆ.

ಮೊದಲ ದಿನವೇ ಭರ್ಜರಿ ವ್ಯಾಪಾರ: ಸಂತೆ ಪ್ರಾರಂಭದ ದಿನವೇ ನಿರೀಕ್ಷೆಗೂ ಮೀರಿ ಆಗಮಿಸಿದ್ದ ರೈತರು ಹಾಗೂ ವ್ಯಾಪಾರಸ್ಥರು ಉತ್ತಮ ವ್ಯಾಪಾರ ಮಾಡಿದರು. ಮೂಲಂಗಿ, ಕ್ಯಾರೆಟ್, ಬೀನ್ಸ್, ಗೆಡ್ಡೆಕೋಸು, ಬಾಳೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಮಾವಿನಹಣ್ಣು, ಶುಂಠಿ, ಮೆಣಸಿನಕಾಯಿ, ಸೌತೆ, ಎಳನೀರು, ವಿವಿಧ ಬಗೆಯ ಹೂವು ಸೇರಿದಂತೆ ಕುರಿ, ಕೋಳಿಗಳ ಮಾರಾಟ ಭರ್ಜರಿಯಾಗಿಯೇ ನಡೆಯಿತು.

ಸಾರ್ವಜನಿಕರ ಸಂತೆ ಉದ್ಘಾಟಿಸಿದ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸುತ್ತಮುತ್ತಲಿನ ಜನರಿಗೆ ಈ ಸಂತೆಯಿಂದ ಅನುಕೂಲವಾಗಲಿದೆ. ರೈತರು ಈ ಸಂತೆಯನ್ನು ಬಳಸಿಕೊಂಡು ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಕಾಟವಿಲ್ಲದೆ ಮಾರಾಟ ಮಾಡಬೇಕು. ಜತೆಗೆ ಸಂತೆಯಲ್ಲಿ ಸೇರುವ ವ್ಯಾಪಾರಸ್ಥರು ಸಂತೆ ತೆರೆದಿರುವ ವಿಚಾರವನ್ನು ಇತರ ಸಂತೆಗಳಲ್ಲಿ ತಿಳಿಸಿ ಹೆಚ್ಚಿನ ವ್ಯಾಪಾರಸ್ಥರು ಮತ್ತು ಗ್ರಾಹಕರು ಇಲ್ಲಿಗೆ ಬರುವಂತೆ ನೋಡಿಕೊಳ್ಳಬೇಕು. ಸಂತೆಗೆ ಪ್ರಾರಂಭಿಕವಾಗಿ ಅಗತ್ಯವಿರುವ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶೌಚಗೃಹ, ರೈತರು ನೆರಳಲ್ಲಿ ಕುಳಿತು ವ್ಯಾಪಾರ ಮಾಡಲು ಅಗತ್ಯವಿರುವ ಶೆಡ್ಡುಗಳು, ರಸ್ತೆ ಸೇರಿದಂತೆ ವ್ಯಾಪಾರಸ್ಥರು ಮತ್ತು ರೈತರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ರೈತರು ಬೆಳೆಯುವ ತರಕಾರಿ, ಹೂವು ಹಾಳಾಗದಂತೆ ದಾಸ್ತಾನು ಮಾಡಲು ಈಗಾಗಲೇ ಜಕ್ಕನಹಳ್ಳಿ ಬಳಿ ಶೀತಲೀಕರಣ ಘಟಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಾದ ಬಳಿಕ ಬನ್ನಂಗಾಡಿ ಗ್ರಾಮದ ಬಳಿಯೂ ಘಟಕ ನಿರ್ಮಾಣ ಮಾಡಲಾಗುವುದು. ಸಂತೆ ತೆರೆಯಲು ಈ ಭಾಗದ ಎಲ್ಲ ರೈತರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಾದಿಯಾಗಿ ಹಲವಾರು ಮುಖಂಡರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜುನಾಥ್, ವೈ.ಜಿ.ರಘು, ಅತ್ತಿಗಾನಹಳ್ಳಿ ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net