

ಹಳೇಬೀಡು: ಹೊಯ್ಸಳರ ಕಾಲದ ಐತಿಹಾಸಿಕ ದೇಗುಲಗಳು ಯುನೆಸ್ಕೊ ಮಾನ್ಯತೆ ಪಡೆದಿರುವ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಚೀಟಿಗಳನ್ನು ಹೊರತರುತ್ತಿರುವುದು ಅಂಚೆ ಇಲಾಖೆಗೆ ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಅಂಚೆ ವೃತ್ತದ ಪ್ರಧಾನ ನಿರ್ದೇಶಕ ರಾಜೇಂದ್ರಕುಮಾರ್ ಹೇಳಿದರು.
ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಬುಧವಾರ ಅಂಚೆ ಇಲಾಖೆಯಿಂದ ಆಯೋಜಿಸಿದ್ದ ಕರ್ನಾಪೆಕ್ಸ್-2024 ಜಾಲತಾಣ ಹಾಗೂ ಲಾಂಛನ ಅನಾವರಣ ಹಾಗೂ ಚಿತ್ರಾತ್ಮಕ ಪೋಸ್ಟ್ ಕಾರ್ಡ್‌ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಚೆ ಸಪ್ತಾಹದ ಪ್ರಯುಕ್ತ ಬುಧವಾರ ದೇಶದ ವಿವಿಧೆಡೆ ಐತಿಹಾಸಿಕ ಅಂಚೆ ಚೀಟಿಗಳ ಸಂಗ್ರಹ ದಿನವನ್ನು ಆಚರಿಸಲಾಗುತ್ತಿದೆ. ರಾಜ್ಯದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇಗುಲಗಳು ಯುನೆಸ್ಕೊ ಪಟ್ಟಿಗೆ ಸೇರಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಲಾಖೆಯ ಸಂಗ್ರಹದಲ್ಲಿರುವ ರಾಜ್ಯದ ಚಾರಿತ್ರಿಕ ಸ್ಮಾರಕಗಳ ಚಿತ್ರಸಹಿತ ಪೋಸ್ಟ್ ಕಾರ್ಡ್‌ಗಳು ಹಾಗೂ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಐತಿಹಾಸಿಕ ದೇಗುಲಗಳ ಚಿತ್ರವಿರುವ ವಿಶೇಷ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ನಮ್ಮ ಪರಂಪರೆ, ಸಂಸ್ಕೃತಿಯನ್ನು ದೇಶದೆಲ್ಲೆಡೆ ಹರಡುವ ಕಾರ್ಯದಲ್ಲಿ ಪುಟ್ಟ ಹೆಜ್ಜೆ ಇಟ್ಟಂತೆ. ಅಂಚೆ ಇಲಾಖೆಗೆ ಗ್ರಾಮಾಂತರ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯನ್ನೂ ತಲುಪುವ ಶಕ್ತಿಯಿದೆ. ನಮ್ಮ ಐತಿಹಾಸಿಕ ಪರಂಪರೆಯನ್ನು ಪ್ರಚಾರ ಮಾಡಲು ಹೆಮ್ಮೆ ಪಡುತ್ತೇವೆ ಎಂದರು.
ಸಪ್ತಾಹದ ಅಂಗವಾಗಿ ಒಂದು ವಾರ ವಿವಿಧೆಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪರಿಸರವು ನಮ್ಮ ಮನೆಯಷ್ಟೇ ಪವಿತ್ರ ಎಂದು ಭಾವಿಸಿ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಪಾರಂಪರಿಕ ತಾಣಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಕೇಂದ್ರ ಪುರಾತತ್ವ ವಿಭಾಗದ ಬೆಂಗಳೂರು ವಲದ ಅಧೀಕ್ಷಕ ಬಿಪಿನ್‌ಚಂದ್ರ ನೇಗಿ ಮಾತನಾಡಿ, ಹಳೇಬೀಡು, ಬೇಲೂರು ಹಾಗೂ ಸೋಮನಾಥಪುರ ದೇಗುಲಗಳನ್ನು ವಿಶ್ವಪರಂಪರೆ ತಾಣವೆಂದು ಘೋಷಿಸಿರುವುದು ನಮ್ಮೆಲ್ಲರ ಹೊಣೆಗಾರಿಕೆ ಹೆಚ್ಚಿಸಿದೆ. ಸ್ಮಾರಕ ಸಂರಕ್ಷಣೆ ಹಾಗೂ ಪರಂಪರೆ ಉಳಿವಿಗೆ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಯುನೆಸ್ಕೊ ತಂಡವು ಮತ್ತೊಮ್ಮೆ ಭೇಟಿ ನೀಡಲಿದ್ದು, ನಂತರ ಅಭಿವೃದ್ಧಿ ಹಾಗೂ ನಿರ್ವಹಣೆ ಕುರಿತಂತೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
ದಕ್ಷಿಣ ಕರ್ನಾಟಕ ವಲಯ ಅಂಚೆ ನಿರ್ದೇಶಕ ಎಲ್.ಕೆ.ದಾಸ್, ಹಾಸನ ವಲಯ ಅಧೀಕ್ಷಕ ಜೋಸೆಫ್ ರೊಡ್ರಿಗಸ್, ಪ್ರಾಚ್ಯವಸ್ತು ಸಂಗ್ರಹಾಲಯ ಮೈಸೂರು ವಲಯ ಅಧೀಕ್ಷಕ ಗುರು ಬಾಗಿ, ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ಮತ್ತಿತರರಿದ್ದರು.