ಸವಾರರ ಕಷ್ಟಕ್ಕೆ ಮಿಡಿದ ಪಿಎಸ್‌ಐ

FotoJet (3)
Published on

ರಮೇಶ್ ಗುಗ್ಗರಿ ಸಾಮಾಜಿಕ ಕಳಕಳಿಗೆ ಸಾರ್ವಜನಿಕರ ಮೆಚ್ಚುಗೆ | ಸ್ವಂತ ಹಣದಲ್ಲಿ ರಸ್ತೆಗುಂಡಿ ಮುಚ್ಚಿಸಿದ ಅಧಿಕಾರಿ

ಗೌರಿಬಿದನೂರು : ವಾಹನ ಸವಾರರ ಕಷ್ಟ ಕಂಡು ಪೊಲೀಸರೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಎಪಿಎಂಸಿ ರಸ್ತೆ ಟೋಲ್ ವ್ಯಾಪ್ತಿಗೆ ಒಳಪಟ್ಟಿದೆ. ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿತ್ತು. ಗುಂಡಿಗಳನ್ನು ಮುಚ್ಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಗುಂಡಿಗಳಿಂದಾಗಿ ಪದೇಪದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೂ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ. ಕೊನೆಗೆ ಗ್ರಾಮಾಂತರ ಠಾಣೆ ಎಸ್‌ಐ ರಮೇಶ್ ಗುಗ್ಗರಿ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸುವ ಕೆಲಸವನ್ನು ಬುಧವಾರ ಮಾಡಿದರು.
ಗುಂಡಿಗಳನ್ನು ಮುಚ್ಚಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗೆ ತಾತ್ಕಾಲಿಕವಾಗಿ ಪರಿಹಾರ ದೊರೆತಂತಾಗಿದೆ. ಪೊಲೀಸ್ ಅಧಿಕಾರಿಯ ಸಾಮಾಜಿಕ ಕಳಕಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರು ಟೋಲ್ ಹಣ ವಸೂಲಿಗೆ ಮಾತ್ರ ಸೀಮಿತವಾಗಬಾರದು. ಈಗಲಾದರೂ ಎಚ್ಚೆತ್ತು ದುರಸ್ತಿ ಕೆಲಸ ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು. ಹಾಗೂ ಸೂಕ್ತ ನಿರ್ವಹಣೆಗೆ ಗಮನ ಹರಿಸಬೇಕು- ರಘು, ಗೌರಿಬಿದನೂರು

ರಸ್ತೆ ಹಾಳಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದವು. ಅಪಘಾತಗಳು ಸಂಭವಿಸಿ ಸಾರ್ವಜನಿಕರ ಪ್ರಾಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಗುಂಡಿ ಮುಚ್ಚಿಸಲಾಗಿದೆ.- ರಮೇಶ್ ಗುಗ್ಗರಿ, ಪಿಎಸ್‌ಐ, ಗೌರಿಬಿದನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net