

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಮಾಗಡಿ ತಾಲೂಕಿನ ದರ್ಶನ್ ಗೌಡ ಎಂಬಾತನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಐ ಪರೀಕ್ಷೆಯಲ್ಲಿ ದರ್ಶನ್ ಗೌಡ 5ನೇ ರ್ಯಾಂಕ್ ಪಡೆದಿದ್ದ. ದರ್ಶನ್ ಗೌಡ ಮಾಗಡಿ ತಾಲೂಕು ಜೆಡಿಎಸ್ ಮುಖಂಡರೂ ಆದ, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಗೌಡರ ಮಗ. ಈತ ಪಿಎಸ್‌ಐ ಕೆಲಸಕ್ಕಾಗಿ 80 ಲಕ್ಷ ಹಣ ಕೊಟ್ಟು ಡೀಲ್ ಮಾಡಿಕೊಂಡಿದ್ದಾನೆ ಎಂದು ಆರಂಭದಲೇ ಆರೋಪ ಕೇಳಿಬಂದಿತ್ತು. ದರ್ಶನ್ ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು, ಬಳಿಕ ಸಚಿವ ಅಶ್ವತ್ಥ ನಾರಾಯಣ್ರ ಒತ್ತಡಕ್ಕೆ ಮಣಿದು ಬಿಟ್ಟು ಕಳಿಸಿದ್ರು ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು. ಇದೀಗ ದರ್ಶನ್ ಗೌಡನನ್ನು ಬಂಧಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಹೋದರ ಸತೀಶ್ ಗೌಡ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ದರ್ಶನ್ಗೌಡ ಎಂಬ ಅಭ್ಯರ್ಥಿಯಿಂದ 80 ಲಕ್ಷ ರೂ. ಪಡೆದಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಉಗ್ರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಪ್ರಭಾವಿ ಸಚಿವರ ತಮ್ಮನ ಮೂಲಕ ಮಾಗಡಿ ಮೂಲದ ಅಭ್ಯರ್ಥಿ ಹಣದ ವ್ಯವಹಾರ ಮಾಡಿದ್ದಾರೆ. ನಾವೆಲ್ಲ ಗಂಡಸರಲ್ಲ, ಅವರೊಬ್ಬರೇ ಗಂಡಸರು ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಕೈ ತೋರಿಸಿದ್ದರು. ರಾಜಕೀಯ ನಾಯಕರ ಕೆಸರೆರಚಾಟದ ಬೆನ್ನಲ್ಲೇ ದರ್ಶನ್ಗೌಡನ ತಂದೆ, ಜೆಡಿಎಸ್ ಮುಖಂಡ ವೆಂಕಟೇಶ್ ಬಹಿರಂಗ ಹೇಳಿಕೆ ಕೊಟ್ಟಿದ್ದರು.
ನಾನು ತಾಪಂ ಮಾಜಿ ಉಪಾಧ್ಯಕ್ಷನಾಗಿ ರಾಜಕೀಯ ಜೀವನದಲ್ಲಿ ಇದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಅವರ ತಮ್ಮ ಸತೀಶ್ಗೌಡ ಇಬ್ಬರೂ ಪರಿಚಯಸ್ಥರು ಹಾಗೂ ಸಂಬಂಧಿಗಳು. ಆದರೆ ಮಗನ ಕೆಲಸದ ವಿಚಾರದಲ್ಲಿ ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ ಎಂದಿದ್ದ ವೆಂಕಟೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಿಚಯ ಕೂಡ ಇದೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ನಲ್ಲಿದ್ದ ಅವಧಿಯಲ್ಲಿ ನನ್ನ ಮನೆಯಲ್ಲೇ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಇಂದು ನನ್ನ ಗುರುತು ಹಿಡಿಯುವುದಿಲ್ಲ. ನಾನು ಬಹಳ ಹಿಂದಿನಿಂದಲೂ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಎಲ್ಲ ನಾಯಕರ ಪರಿಚಯ ಇದೆ. ನಮ್ಮ ಮನೆಗೆ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. 1994ರಿಂದಲೂ ರಾಜಕೀಯದಲ್ಲಿ ಇದ್ದೇನೆ, 1994ರಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೆ. ನಂತರ ಕಾಂಗ್ರೆಸ್ಗೆ ಸೇರ್ಪಡೆಯಾದೆ. 2004ರಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದೆ. ಪ್ರಸ್ತುತ ಜೆಡಿಎಸ್ನಲ್ಲಿದ್ದೇನೆ ಎಂದು ವೆಂಕಟೇಶ್ ಹೇಳಿದ್ದರು.
ನಾಯಕರು ತಮ್ಮ ರಾಜಕೀಯ ಹಗೆತನಕ್ಕೆ ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ನನ್ನ ಮಗ ದರ್ಶನ್ಗೌಡ ಪಿಎಸ್‌ಐ ಪರೀಕ್ಷೆ ಬರೆದು 5ನೇ ರ್ಯಾಂಕ್ ಪಡೆದಿರುವುದು ನಿಜ. ನಮ್ಮ ಮಗ ಸಿಐಡಿ ವಿಚಾರಣೆ ಎದುರಿಸಿದ್ದಾನೆ. ಆತನ ಒಎಂಆರ್ ಶೀಟ್, ಹಾಲ್ ಟಿಕೆಟ್ ಹಾಜರುಪಡಿಸಿದ್ದಾನೆ. ತನಿಖೆ ನಡೆಯುತ್ತಿದೆ. ತಪ್ಪಿದ್ದರೆ ಶಿಕ್ಷೆಯಾಗಲಿ ಎಂದಿದ್ದರು.