3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ವೈದ್ಯಕೀಯ ಸೀಟು ಹಂಚಿಕೆ

Published on

ಬೆಂಗಳೂರು: ಪ್ರಸಕ್ತ 2025ನೇ ಸಾಲಿನ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪಣೆಯಿದ್ದಲ್ಲಿ ಅ.25ರ ಬೆಳಿಗ್ಗೆ 10ರೊಳಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಬಂದು ಬರೆದು ತಿಳಿಸಬಹುದು ಅಥವಾ ಛಿಚ್ಠಠಿಟ್ಟಜಿಠಿಃ್ಞಜ್ಚಿ.ಜ್ಞಿ ಗೆ ಇ-ಮೇಲ್ ಕಳಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚಿಸಿದೆ.

ಅಖಿಲ ಭಾರತ ಕೋಟಾ ಅಡಿಯ ಮೂರನೇ ಸುತ್ತಿನಲ್ಲಿ ಪಾಲ್ಗೊಂಡು ಸೀಟು ಪಡೆಯುವ ಜೊತೆಗೆ ಕೆಇಎ ಮೂರನೇ ಸುತ್ತಿನಲ್ಲಿಯೂ ಸೀಟು ಪಡೆದಿರುವ ಅಭ್ಯರ್ಥಿಗಳು ಕೆಇಎ ಸೀಟು ಉಳಿಸಿಕೊಳ್ಳಲು ಇಚ್ಛಿಸಿದಲ್ಲಿ ಅ.25ರ ಮಧ್ಯಾಹ್ನ 12.30ರೊಳಗೆ ಕೆಇಎ ಕಚೇರಿಗೆ ಬಂದು ಖುದ್ದು ಮನವಿ ನೀಡಬೇಕು ಅಥವಾ ತಾವು ಅರ್ಜಿಯಲ್ಲಿ ನಮೂದಿಸಿದ್ದ ಇ-ಮೇಲ್ ಐ.ಡಿ.ಯಿಂದ ಇ-ಮೇಲ್ ಕಳಿಸಬೇಕು. ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳನ್ನು 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ ಹಾಗೂ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹಿಂದಿರುಗಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.27ರ ಮಧ್ಯಾಹ್ನ 12ರ ನಂತರ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಅ.30ರೊಳಗೆ ಉಳಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್ ಲೋಡ್ ಮಾಡಿಕೊಂಡು ಆಯಾ ಕಾಲೇಜಿಗೆ ಎಲ್ಲ ಮೂಲದಾಖಲೆಗಳೊಂದಿಗೆ ತೆರಳಿ ಪ್ರವೇಶ ಪಡೆಯಬೇಕು. ಈ ಸುತ್ತಿನಲ್ಲಿ ಅಂತಿಮ ಸೀಟು ಹಂಚಿಕೆಯಾದ ನಂತರ ಅದರ ರದ್ದತಿಗಾಗಿ ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಥವಾ ಸೀಟು ರದ್ದುಪಡಿಸಲು ಇಚ್ಚಿಸಿದರೆ ಅಭ್ಯರ್ಥಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ನಿಯಮದ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net