ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ

oppo_2
ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ಒಳಗೊಂಡಂತೆ ಮೂಲ ಸೌಕರ್ಯಗಳನ್ನು ಕೇಳಲು ಹೋದ ಕೃಷಿ ಕೂಲಿಕಾರ ಸಂಘ ಮತ್ತು ಸಂಘದ ರಾಜ್ಯಾಧ್ಯಕ್ಷರ ಮೇಲೆ ಅನಗತ್ಯ ಆರೋಪ ಮಾಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರ ಕ್ರಮ ಖಂಡಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಮದ್ದೂರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿದರಹಳ್ಳಿ ಜಯಮ್ಮ, ಕ್ಯಾತಘಟ್ಟ ಜಯಮ್ಮ, ಅರುಣ್‌ಕುಮಾರ್, ಆನಂದ್, ಅನಿತಾ, ಶೋಭಾ, ಈರೇಗೌಡ, ದಿವ್ಯಾ ಇದ್ದರು.
Published on

ಮದ್ದೂರು: ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ಒಳಗೊಂಡಂತೆ ಮೂಲ ಸೌಕರ್ಯಗಳನ್ನು ಕೇಳಲು ಹೋದ ಕೃಷಿ ಕೂಲಿಕಾರರ ಸಂಘ ಮತ್ತು ಸಂಘದ ರಾಜ್ಯಾಧ್ಯಕ್ಷರ ಮೇಲೆ ಅನಗತ್ಯ ಆರೋಪ ಮಾಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಂಗಳವಾರ ತಾಲೂಕು ಕಚೇರಿ ಮುಂದೆ ಜಮಾಯಿಸಿದ ಸಂಘದ ಪದಾಧಿಕಾರಿಗಳು ಜಿಪಂ ಸಿಇಒ ನಂದಿನಿ ಅವರನ್ನು ತಕ್ಷಣ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಟಿ.ಪಿ.ಅರುಣ್‌ಕುಮಾರ್ ಮಾತನಾಡಿ, ಜುಲೈ 4ರಂದು 2 ಸಾವಿರಕ್ಕೂ ಹೆಚ್ಚು ಕೃಷಿ ಕೂಲಿಕಾರರು ಉದ್ಯೋಗ ಖಾತ್ರಿ ಕೆಲಸ, ಬಾಕಿ ಕೂಲಿ, ಬಡವರಿಗೆ ನಿವೇಶನ ಹಂಚಿಕೆ, ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ, ಸುಸಜ್ಜಿತ ಸ್ಮಶಾನ, ಬ್ಯಾಂಕ್ ಸಾಲ, ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿ, ಹಳ್ಳಿಗಳಲ್ಲಿ ಹದಗೆಟ್ಟಿರುವ ಬೀದಿ ದೀಪಗಳನ್ನು ದುರಸ್ತಿ ಮಾಡಲು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಭರ್ತಿ ಮಾಡುವುದು  ಒಳಗೊಂಡಂತೆ ಜಿಲ್ಲೆಯಲ್ಲಿ ಬಾಧಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯಿತಿ ಮುಂದೆ ಹೋರಾಟ ನಡೆಸಲಾಗಿತ್ತು ಎಂದರು.

ಹೋರಾಟ ವೇಳೆ ಜಿಪಂ ಸಿಇಒಗೆ ಮನವಿ ನೀಡಲು ಹೋದ ಸಂದರ್ಭದಲ್ಲಿ 3 ಗಂಟೆಗೆ ಹೆಚ್ಚು ಕಾಲ ಮನವಿಯನ್ನು ಸ್ವೀಕರಿಸದೆ ಕೂಲಿಕಾರರನ್ನು ಕಾಯಿಸುವುದಲ್ಲದೆ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಆಡಳಿತವನ್ನು ದುರುಪಯೋಗ ಪಡಿಸಿಕೊಂಡು, ಅವರ ವಿರುದ್ಧ ಕೆಳಹಂತದ ಅಧಿಕಾರಿಗಳನ್ನು ಹೋರಾಟಕ್ಕೆ ಇಳಿಸಿರುವ ಜಿಪಂ ಸಿಇಒ ಕೆ.ಆರ್.ನಂದಿನಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡೇಕೆಂದು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಸಂಘದ ಕಾಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಬಿದರಹಳ್ಳಿ ಜಯಮ್ಮ, ಕ್ಯಾತಘಟ್ಟ ಜಯಮ್ಮ, ಟಿ.ಎಚ್.ಅನಂದ್, ಅರುಣ್‌ಕುಮಾರ್, ಅನಿತಾ, ಶೋಭಾ, ಈರೇಗೌಡ, ದೇವರಾಜು, ದಿವ್ಯಾ, ವೈ.ಕೆ.ಗೋಪಾಲಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net