

ಹಾನಗಲ್ಲ: ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ಸಮಸ್ಯೆ ಪರಿಹಾರಕ್ಕಾಗಿ ಪುರಸಭೆ, ಸಣ್ಣ ನೀರಾವರಿ ಹಾಗೂ ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಂಸದ ಶಿವಕುಮಾರ ಉದಾಸಿ ರ್ಚಚಿಸಿ, 2 ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.
ಗೃಹ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಭಜಕ್ಕನವರ ಹಾಗೂ ಇಂಜಿನಿಯರ್ ನಾಗರಾಜ ಮಿರ್ಜಿ ಮಾಹಿತಿ ನೀಡಿ, ಕಳೆದ 5 ವರ್ಷಗಳಿಂದ ಕೆರೆಯಲ್ಲಿನ ನೀರು ಖಾಲಿಯಾಗಿಲ್ಲ. ಮತ್ತೆ ಹೊಸ ನೀರು ಸೇರಿಕೊಳ್ಳುತ್ತದೆ. ಅದರಿಂದಾಗಿ ಫಂಗಸ್ ಉತ್ಪತ್ತಿಯಾಗಿದ್ದು, ಶುದ್ಧೀಕರಿಸಲು ಹಲವು ವಿಧಾನಗಳನ್ನು ಕೈಗೊಳ್ಳಲಾಗಿದೆ. ಕುಮಾರಪಟ್ಟಣ ಗ್ರಾಸಿಂ ಇಂಡಸ್ಟ್ರೀಸ್ ತಜ್ಞರು ಭೇಟಿ ನೀಡಿ, ನೀರಿನ ಗುಣಲಕ್ಷಣ ಪರಿಶೀಲಿಸಿ ಶುದ್ಧೀಕರಿಸುವ ಮಾರ್ಗೆಪಾಯಗಳನ್ನು ತಿಳಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗಿದ್ದು, ಈಗ ನೀರಿನ ಗುಣಮಟ್ಟ ಉತ್ತಮಗೊಂಡಿದೆ. ಪಟ್ಟಣದ ಹಲವು ಬಡಾವಣೆಗಳಿಗೆ ಸರಬರಾಜು ಮಾಡಿ ಪರಿಶೀಲಿಸಲಾಗಿದೆ ಎಂದು ವಿವರಿಸಿದರು.
ಬೃಹತ್ ನೀರಾವರಿ ಇಂಜಿನಿಯರ್ ಜಾವೇದ್ ಮುಲ್ಲಾ ಮಾತನಾಡಿ, ಧರ್ವ ಜಲಾಶಯದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ 15 ಅಡಿ ಕಾಯ್ದಿರಿಸಲಾಗುತ್ತಿದೆ. ಅದನ್ನು ಪಟ್ಟಣದ ಆನೆಕೆರೆಗೆ ಕಾಲಕಾಲಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಆನೆಕೆರೆಯ ನೀರು ಹೊರತುಪಡಿಸಿ ಇದೇ ಕೆರೆಗೆ ನೇರವಾಗಿ ಜಲಾಶಯದಿಂದ 18 ಕಿ.ಮೀ. ಪೈಪ್ಲೈನ್ ಅಳವಡಿಸುವ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಮಂಜೂರಾತಿ ಹಂತದಲ್ಲಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೆರೆಯಲ್ಲಿನ ಫಂಗಸ್ ಹೊರಹಾಕಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಿ ಜಲಾಶಯದಿಂದ ಅಗತ್ಯವಾದ ನೀರನ್ನು ಬಿಡುಗಡೆಗೊಳಿಸಬೇಕು. ಅಲ್ಲದೆ, ಕೆರೆ ಹೊರತುಪಡಿಸಿ ಪರ್ಯಾಯ ವ್ಯವಸ್ಥೆಗಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳನ್ನು ದುರಸ್ತಿಗೊಳಿಸಿ ಸಮೀಪದ ಬಡಾವಣೆಗಳಿಗೆ ನೀರು ಸರಬರಾಜು ಮಾಡಬೇಕು. ಹಲವು ಬಡಾವಣೆಗಳ ಗಟಾರದ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಬೇಕು. ಚರಂಡಿ ನೀರು ಸಂಸ್ಕರಣೆಗಾಗಿ ಘಟಕ ನಿರ್ವಿುಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಧರ್ವ ಜಲಾಶಯದ ಹೂಳೆತ್ತುವ ಯೋಜನೆ ರೂಪಿಸಬೇಕು. ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿನ ವಿಷಯದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಇಲಾಖೆಯ ಇಇ ಜೆ. ವೀರನಗೌಡ, ಎಇಇ ಕೆ. ರವಿಕುಮಾರ, ಬೃಹತ್ ನೀರಾವರಿ ಇಲಾಖೆ ಎಇಇ ಶಿವಮೂರ್ತಿ, ಸಣ್ಣ ನೀರಾವರಿ ಇಲಾಖೆ ಎಇಇ ಗಂಗಾಧರ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಸಭೆಯ ನಂತರ ಪಟ್ಟಣದ ದರ್ಗಾದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.