ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ದೊರಕಲಿ

ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ದೊರಕಲಿ
Published on

ತಿ.ನರಸೀಪುರ: ಸಾರಿಗೆ ಸಂಚಾರ ಸೌಲಭ್ಯವಿಲ್ಲದ ಗ್ರಾಮಗಳನ್ನು ಪಟ್ಟಿಮಾಡಿ, ಸಂಚಾರ ಸಮಯವನ್ನು ನಿಗದಿಗೊಳಿಸಿ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಮಹದೇವಪ್ರಭು ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧಿತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಗ್ರಾಮಗಳಿಗೆ ಬಸ್‌ಗಳು ಬಾರದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಬಸ್ ಸಂಚಾರ ಇಲ್ಲದ ಗ್ರಾಮಗಳನ್ನು ಗುರುತಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ತುಂಬ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬುದೇ ನಮ್ಮ ಉದ್ದೇಶ. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರೊಂದಿಗೆ ಚರ್ಚಿಸಲಾಗಿದೆ. ಯುವನಿಧಿಗೆ ಹೆಚ್ಚು ವಿದ್ಯಾರ್ಥಿಗಳನ್ನು ನೋಂದಣಿ ಮಾಡುವ ನಿಟ್ಟಿನಲ್ಲಿ ಯೋಜನೆ ಮಾಡಲಾಗುವುದು ಎಂದರು.

ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈವರೆಗೆ ಗೃಹಲಕ್ಷ್ಮೀ 16 ಕೋಟಿ ರೂ. ಗೃಹಜ್ಯೋತಿ 45 ಕೋಟಿ ರೂ. ಯುವನಿಧಿ 23 ಲಕ್ಷ ರೂ., ಅನ್ನಭಾಗ್ಯ 1.32 ಕೋಟಿ ರೂ. ಸೇರಿದಂತೆ 5 ಗ್ಯಾರಂಟಿ ಯೋಜನೆಗಳಿಗೆ 109.83 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅನಂತರಾಜು, ಯೋಜನಾಧಿಕಾರಿ ರಂಗಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ವಿ.ವೀರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋವಿಂದರಾಜು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಪುಷ್ಪಾ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕೆಬ್ಬೆ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net