ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ

24 ಪಿವೈಪಿ 01
ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಮಹಮದ್ ಫಯಾಸುದೀನ್ ಮಾತನಾಡಿದರು. ತಾಪಂ ಇಒ ಸುನಿಲ್ ಕುಮಾರ್ ಇದ್ದರು.
Published on

ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕಿದೆ ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಹಮದ್ ಫಯಾಸುದೀನ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಅವರಿಂದ ಮಾಹಿತಿ ಪಡೆದು ಮಾತನಾಡಿದರು. ಕಳೆದ ಏಳೆಂಟು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದ್ದ ಪಿರಿಯಾಪಟ್ಟಣ ತಾಲೂಕು ಕಳೆದ ಎರಡು ವರ್ಷಗಳಿಂದ ಕಳಪೆ ಫಲಿತಾಂಶ ಪಡೆಯಲು ಕಾರಣವೇನು ಎಂದು ಪ್ರಶ್ನಿಸಿದರು. ಒಟ್ಟಾರೆ ತೇರ್ಗಡೆ ಪ್ರಮಾಣ ಶೇ.85 ರಷ್ಟು ಇದ್ದ ತಾಲೂಕು ಇದೀಗ ಶೇ. 65ಕ್ಕೆ ಕುಸಿಯಲು ಪ್ರಮುಖ ಕಾರಣಗಳು ಏನು ಎಂಬುದನ್ನು ಪಟ್ಟಿ ಮಾಡಿ ನೀಡುವಂತೆ ತಿಳಿಸಿದರು. ತಾಲೂಕಿನಲ್ಲಿ ಅತಿ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಲ್ಲಿನ ಶಿಕ್ಷಕರು ಮತ್ತು ಮುಖ್ಯಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ಎಲ್ಲ ಪ್ರೌಢಶಾಲೆಗಳಿಗೂ ಉತ್ತಮ ಶಿಕ್ಷಕರನ್ನು ನಿಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ತಾಕೀತು ಮಾಡಿದರು. ರಾವಂದೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಅತ್ಯಂತ ಕಳಪೆ ಫಲಿತಾಂಶ ಬರಲು ಕಾರಣವೇನು? ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಮನ್ವಯತೆ ಕೊರತೆ ಇದೆಯಾ ಎಂಬುದನ್ನು ಪರಿಶೀಲನೆ ನಡೆಸಿ ತಿಳಿಸಲು ಸೂಚನೆ ನೀಡಿದರು.

ತಾಲೂಕಿನ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಮೂಲಸೌಕರ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಹೊಂದಿದೆ. ಅಲ್ಲಿನ ಫಲಿತಾಂಶವೂ ಸಹ ಅತ್ಯುತ್ತಮವಾಗಿದ್ದು, ಇತರ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಈ ರೀತಿಯ ಕಾಳಜಿಯನ್ನು ಏಕೆ ಹೊಂದಿಲ್ಲ ಎಂದು ಪ್ರಶ್ನಿಸಿದರು.

ಬಿಇಒ ರವಿಪ್ರಸನ್ನ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 670 ಹಾಗೂ ಪ್ರೌಢಶಾಲೆ ವಿಭಾಗದಲ್ಲಿ 174 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಯೂನಿಫಾರ್ಮ್ ವಿತರಣೆಯಲ್ಲಿ ಈಗಾಗಲೇ ಶೇಕಡ 98 ರಷ್ಟು ಪ್ರಗತಿ ಸಾಧಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೂಗಳನ್ನು ನೀಡಲು ಆಯಾ ಶಾಲೆಯ ಎಸ್‌ಡಿಎಂಸಿ ಖಾತೆಗೆ ಸರ್ಕಾರದಿಂದಲೇ ನೇರವಾಗಿ ಹಣ ಪಾವತಿಯಾಗಿದೆ ಎಂದರು. ಸರ್ಕಾರದ ಮಾನದಂಡದ ಅನ್ವಯ ವಿದ್ಯಾರ್ಥಿಗಳಿಗೆ ನಿಗದಿತ ಕಂಪನಿಯ ಗುಣಮಟ್ಟದ ಶೂಗಳನ್ನು ವಿತರಣೆ ಮಾಡುವಂತೆ ಎಲ್ಲ ಎಸ್‌ಡಿಎಂಸಿ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಮಾಹಿತಿ ನೀಡುತ್ತಾ ಕಳೆದ ಏಪ್ರಿಲ್ ಮತ್ತು ಮೇನಲ್ಲಿ ತಾಲೂಕಿನ 82,500 ರಾಸುಗಳಿಗೆ ಎರಡು ಹಂತದಲ್ಲಿ ಕಾಲುಬಾಯಿ ಜ್ವರದ ಲಸಿಕೆ ಮತ್ತು ಒಂದು ಬಾರಿ ಚರ್ಮಗಂಟು ರೋಗದ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಈ ವರ್ಷ ಹೊಸದಾಗಿ ನಾಲ್ಕು ಪಶುವೈದ್ಯಕೀಯ ಸೇವಾ ಆಸ್ಪತ್ರೆಗಳು ಮಂಜೂರಾಗಿದ್ದು ಆಂಬುಲೆನ್ಸ್ ಮೂಲಕವೂ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಮಾಜಿಕ ಅರಣ್ಯ ವಲಯ ಮತ್ತು ವನ್ಯಜೀವಿ ವಿಭಾಗ, ಬಿಸಿಎಂ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಇಒ ಸುನಿಲ್ ಕುಮಾರ್, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಮುನಿಯಪ್ಪ, ಆರ್‌ಎಫ್‌ಒಗಳಾದ ಕೆ.ಇ.ಸುಬ್ರಮಣ್ಯ, ರಶ್ಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net