ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ

09 HANUR 3
Published on

ಹನೂರು: ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ದೀಪಾವಳಿ ಜಾತ್ರೆಯನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದರು.


ಮ.ಬೆಟ್ಟದ ನಾಗಮಲೆ ಭವನದಲ್ಲಿ ಗುರುವಾರ ದೀಪಾವಳಿ ಜಾತ್ರಾ ಮಹೋತ್ಸವ ಸಂಬಂಧ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.


ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರೆಗೆ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ದಿಸೆಯಲ್ಲಿ ಕುಡಿಯುವ ನೀರು, ಶೌಚಗೃಹ, ದಾಸೋಹ, ನೆರಳಿನ ವ್ಯವಸ್ಥೆ, ಬಸ್ ಸೌಕರ್ಯ, ಆರೋಗ್ಯ ಸೇವೆ, ಸಮರ್ಪಕ ವಿದ್ಯುತ್, ಸ್ವಚ್ಛತೆ ಇನ್ನಿತರ ಸೌಕರ್ಯವನ್ನು ಒದಗಿಸುವುದು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವುದು ಆದ್ಯ ಕರ್ತವ್ಯ. ಹಾಗಾಗಿ, ಈಗಾಗಲೇ ವಹಿಸಿರುವ ಜವಾಬ್ದಾರಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಪಾಲಿಸಬೇಕು. ಯಾವುದೇ ಕಾರಣಕ್ಕೂ ಭಕ್ತರಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗುವ ಮೂಲಕ ಜಾತ್ರೆಯ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ಇದೇ ವೇಳೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಸಲಹೆ, ಸೂಚನೆಯನ್ನು ಪಡೆಯಲಾಯಿತಲ್ಲದೆ, ತಾಳುಬೆಟ್ಟದಲ್ಲಿ ಭಕ್ತರಿಗೆ ತಿಂಡಿ ವ್ಯವಸ್ಥೆ, ಶೌಚಗೃಹ ಸೌಕರ್ಯ, ಪಾದಯಾತ್ರಿಗಳಿಗೆ ಪಾಸ್ ಮೂಲಕ ಉಚಿತ ದೇವರ ದರ್ಶನ, ದಾಸೋಹ ವ್ಯವಸ್ಥೆ, ತಾಳುಬೆಟ್ಟದಿಂದ ಮ.ಬೆಟ್ಟದ ಮಾರ್ಗದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಸೆಸ್ಕ್ ಎಇಇ ಶಂಕರ್, ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಪಿಡಿಒ ಕಿರಣ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಪ್ರಾಧಿಕಾರದ ಅಧಿಕಾರಿಗಳು, ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net