ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ

ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ
Published on

ಎಂ.ಪವನ್‌ಕುಮಾರ್ ಕೊಳ್ಳೇಗಾಲ

ಶ್ರೀ ಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಜ.13 ರಿಂದ 5 ದಿನಗಳ ಕಾಲ ಪವಾಡ ಪುರುಷ ಘನನೀಲಿ ಶ್ರೀಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಿಗದಿಗೊಂಡಿದ್ದು, ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.

ಪ್ರತಿ ವರ್ಷ ಮಾಘ ಮಾಸದಲ್ಲಿ ಸುಗ್ಗಿಯ ನಡುವೆ ಶ್ರೀ ಚಿಕ್ಕಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತದೆ. 5 ದಿನ ನಡೆಯುವ ಜಾತ್ರೆಗೆ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜ.13 ರಂದು ಚಂದ್ರಮಂಡಲೋತ್ಸವ, 14 ರಂದು ಹುಲಿವಾಹನ ಉತ್ಸವ, 15 ರಂದು ಮುಡಿಸೇವೆ ಮತ್ತು ರುದ್ರಾಕ್ಷಿ ಮಂಟಪೋತ್ಸವ, 16ರಂದು ರುದ್ರಾಕ್ಷಿ ಮಂಟಪೋತ್ಸವ ಸೇವೆ, 17ರಂದು ಮುತ್ತುರಾಯನ ಸೇವೆ ನಡೆಯಲಿದೆ. ಶ್ರೀ ಚಿಕ್ಕಲ್ಲೂರು ಮಠ ಹಾಗೂ ಜಿಲ್ಲಾಡಳಿತದ ವತಿಯಿಂದ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಆದರೆ, ಪ್ರತಿ ವರ್ಷವೂ ಕೂಡ ಜಾತ್ರೆಯ ಸಂದರ್ಭ ಕೆಲವು ಸೌಕರ್ಯಗಳ ಕೊರತೆಯಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ಬಾರಿ ಜಾತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ ಹಾಗೂ ಮಠದ ಕಡೆಯಿಂದ ಅಗತ್ಯ ಸಿದ್ಧತೆ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂಬೂದು ಭಕ್ತರ ಒತ್ತಾಯವಾಗಿದೆ.

5 ದಿನ ನಡೆಯುವ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ ಸಂದರ್ಭ ದೇವಾಲಯ ಸುತ್ತಲಲ್ಲಿರುವ ಜಾತ್ರಾ ಮಾಳದಲ್ಲಿ ಸಾವಿರಾರು ಜನ ಭಕ್ತರು ತಂಗುವ ಮೂಲಕ ದೇವರ ಸೇವೆ ಮಾಡುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಸೇವೆಗಳು ಹಾಗೂ ಹರಕೆ ತೀರಿಸುತ್ತಾರೆ.

ಭಕ್ತರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಶೌಚಗೃಹ, ಸ್ನಾನದಗೃಹ, ನೀರಿನ ವ್ಯವಸ್ಥೆ, ಪಾಕಿರ್ಂಗ್ ವ್ಯವಸ್ಥೆ ಬಸ್ ವ್ಯವಸ್ಥೆ ಹಾಗೂ ಸ್ವಚ್ಛತೆ, ರಸ್ತೆ ಅಭಿವೃದ್ಧಿ, ಶಿಶು ಹಾರೈಕೆ ಕೊಠಡಿ, ಜಾತ್ರಾ ಮಾಳದಲ್ಲಿ ಜನರು ಉಳಿದುಕೊಳ್ಳುವ ಸ್ಥಳದಲ್ಲಿ ಸ್ವಚ್ಛತೆ ಇನ್ನಿತರ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮಹರಿಸಬೇಕು ಎಂಬೂದು ಬೇಡಿಕೆಯಾಗಿದೆ.

ತರಾತುರಿ ಬೇಡ: ಚಿಕ್ಕಲ್ಲೂರು ಜಾತ್ರೆಗೆ ಸಿದ್ಧತೆ ಪ್ರತಿವರ್ಷವೂ ತರಾತುರಿಯಲ್ಲಿ ನಡೆಯುತ್ತದೆ. ಇದರ ಪರಿಣಾಮ ಸೌಕರ್ಯ ಕಲ್ಪಸಲು ಸಾಧ್ಯವಾಗುತ್ತಿಲ್ಲ. ಈ ಬಾರಿಯ ಜಾತ್ರೆಗೆ ಇನ್ನೂ 25 ದಿನಗಳು ಬಾಕಿ ಇದ್ದು, ಸಕಲ ಸಿದ್ಧತೆಗಳನ್ನು ಕೈಗೊಂಡು ಜಾತ್ರೆ ಯಶಸ್ವಿಗೊಳಿಸಬೇಕು ಎಂಬೂದು ಭಕ್ತರ ಬೇಡಿಕೆ.

ಸ್ವಚ್ಛತೆ, ನೀರಿನ ಸೌಕರ್ಯ ಬಾರದಿರಲಿ: ಸಾವಿರಾರು ಜನರು ಜಾತ್ರೆಗೆ ಬರುವುದರಿಂದ ನೀರಿನ ಬಳಕೆ ಕೂಡ ಹೆಚ್ಚಿರುತ್ತದೆ. ಕಳೆದ ಬಾರಿ ಹಳೆ ಮಠದ ಸಮೀಪದ ಜಮೀನೊಂದರ ತೊಟ್ಟಿಯಲ್ಲಿ ಕೆಸರು ಮಯವಾದ ನೀರಿನಲ್ಲಿಯೇ ಮಕ್ಕಳು, ಮಹಿಳೆಯರು ಸ್ನಾನ ಮಾಡುವ ದೃಶ್ಯ ಕಂಡುಬಂದಿತ್ತು. ದೇವಾಲಯ ಹಿಂಭಾಗವಿರುವ ಶೌಚಗೃಹ, ಸ್ನಾನದ ಮನೆಗೆ ನೀರು ಸರಬರಾಜು ಮಾಡುತ್ತಿದ್ದ ಮೋಟರ್ ಕೆಟ್ಟು, ಜನರು ಮಲ-ಮೂತ್ರ ವಿಸರ್ಜನೆಗೆ ಬಯಲಿಗೆ ತೆರಳುವ ಸನ್ನಿವೇಶ ಏರ್ಪಟ್ಟಿತ್ತು. ಹಣ ನೀಡಿ ಬಿಸಿ ನೀರು ಖರೀದಿಸುವ ಪ್ರಕ್ರಿಯೆ ಕೂಡ ನಡೆಯಿತು. ಅಲ್ಲದೆ ಸ್ವಚ್ಛತೆಗೆ ಆದ್ಯತೆ ನೀಡದೆ ಎಲ್ಲೆಂದರಲ್ಲಿ ಕಸವನ್ನು ಹಾಕುವುದು ಕೂಡ ಸರ್ವೇಸಾಮಾನ್ಯವಾಗಿತ್ತು.

ರಸ್ತೆ ಅಭಿವೃದ್ಧಿಗೆ ಒತ್ತಾಯ: ಕೆಲ ವರ್ಷಗಳಿಂದ ಚಿಕ್ಕಲ್ಲೂರಿಗೆ ತೆರಳುವ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯ ಕೇಳಿಬಂದಿದೆ. ನರೀಪುರ, ಪಾಳ್ಯ ಹಾಗೂ ದೊಡ್ಡಿಂದುವಾಡಿಮಾರ್ಗ ದೇವಾಲಯಕ್ಕೆ ಬರುವ ಪ್ರಮುಖ ರಸ್ತೆ ಯಾಗಿದೆ. ಮತ್ತೀಪುರ ಕ್ರಾಸ್‌ನಿಂದ ಕೊತ್ತನೂರು ಗ್ರಾಮದವರೆಗೆ ರಸ್ತೆ ಸುಸ್ಥಿತಿಯಲ್ಲಿಲ್ಲ. ಪ್ರತಿ ವರ್ಷವೂ ಗುಂಡಿ ಬಿದ್ದ ರಸ್ತೆಗೆ ತೇಪೆ ಹಾಕಲಾಗುತ್ತದೆ. ಸಾವಿರಾರು ವಾಹನಗಳು ಜಾತ್ರೆಗೆ ಬರುವುದರಿಂದ ಜಾತ್ರೆ ಮುಗಿಯುವಷ್ಟರಲ್ಲಿ ತೇಪೆ ಕಿತ್ತು ಬಂದು ರಸ್ತೆ ಗುಂಡಿಮಯವಾಗುತ್ತದೆ. ಈ ಬಾರಿಯಾದರೂ ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಇತ್ತೀಚೆಗೆ ಶಾಸಕರ ನೇತೃತ್ವದಲ್ಲಿ ಚಿಕ್ಕಲ್ಲೂರು ಹಳೇ ಮಠದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ರಸ್ತೆ ಮಾಡದೆ ಜಾತ್ರೆಯನ್ನೇ ಮಾಡಬೇಡಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಶಿಶು ಆರೈಕೆಗೆ ಕೊಠಡಿ ತೆರೆಯಿರಿ: ಜಾತ್ರೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಜತೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯುತ್ತದೆ. ಆದರೆ, ತಾಯಂದಿಯರು ಮಕ್ಕಳಿಗೆ ಹಾಲುಣಿಸಲು ಪರದಾಡುವಂತಾಗುತ್ತದೆ. ಈ ಹಿನ್ನೆಲೆ, ಶಿಶು ಆರೈಕೆ ಕೊಠಡಿಯನ್ನು ತೆರೆಯಬೇಕು ಎಂಬ ಮನವಿ ಕೂಡ ಭಕ್ತರದ್ದಾಗಿದೆ.

ಮಕ್ಕಳ ಭಿಕ್ಷಾಟನೆ ಬಗ್ಗೆ ನಿಗಾ ವಹಿಸಿ: ಜಾತ್ರೆಯಲ್ಲಿ ಮಕ್ಕಳ ಭಿಕ್ಷಾಟನೆ ಸಾಮಾನ್ಯವಾಗಿರುತ್ತದೆ. ಚಿಕ್ಕ ಮಕ್ಕಳು ತಟ್ಟೆ ಹಿಡಿದು, ಕಾಲು, ಕೈ ಮುಟ್ಟಿ ಹಣ ಕೊಡುವಂತೆ ಪೀಡಿಸುವುದು, ಕೈಚಾಚಿ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಕಳೆದ ವರ್ಷವೂ ಮಕ್ಕಳು ಭಿಕ್ಷೆ ಬೇಡುವುದು ಜಾತ್ರೆಯಲ್ಲಿ ಕಂಡು ಬಂದಿತ್ತು. ಮಕ್ಕಳಾ ರಕ್ಷಣಾ ಸಮಿತಿ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net