

ತಿ.ನರಸೀಪುರ: ಜಾನುವಾರುಗಳು ಅಂಗವೈಕಲ್ಯಕ್ಕೆ ತುತ್ತಾದಾಗ ಅವಲಂಬಿತ ರೈತರಿಗೆ ಮಧ್ಯಂತರ ವಿಮೆ ಹಣವನ್ನು ಪರಿಹಾರವಾಗಿ ನೀಡುವ ಸೌಲಭ್ಯವನ್ನು ಹಾಲು ಒಕ್ಕೂಟದಿಂದ ಕಲ್ಪಿಸಬೇಕು ಎಂದು ಚಿದರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್.ಸತೀಶ್ ಆಗ್ರಹಿಸಿದರು.
ತಾಲೂಕಿನ ಚಿದರವಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಆಯೋಜಿಸಿದ್ದ 2024-2025ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಹಾಲು ಕೊಡುವ ಹಸು ವಿವಿಧ ಕಾರಣಗಳಿಂದ ಅಂಗವೈಕಲ್ಯವಾದಾಗ ಕುಟುಂಬದ ನಿರ್ವಹಣೆಗೆ, ಹೈನುಗಾರಿಕೆ ಉಪ ಕಸುಬನ್ನು ಅವಲಂಬಿಸಿರುವ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದರಿಂದ ಜಾನುವಾರುವಿನ ಮಧ್ಯಂತರ ವಿಮೆ ಹಣದ ಅಗತ್ಯವಿದೆ ಎಂದರು.
ಜಾನುವಾರುಗಳನ್ನು ವಿಮೆಗೆ ನೋಂದಾಯಿಸಿರುವುದರಿಂದ ಹಸು ಸಾವನ್ನಪ್ಪಿದರಷ್ಟೇ ವಿಮೆ ಹಣ ಸಿಗುತ್ತದೆ. ನಮ್ಮ ಸಂಘದ ವ್ಯಾಪ್ತಿಯಲ್ಲಿ ನಾಲ್ಕೈದು ಹೈನುಗಾರಿಕೆ ಜಾನುವಾರುಗಳು ಅಂಗವೈಕಲ್ಯದಿಂದ ಬಳಲುತ್ತಿದ್ದು, ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟವು. ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದಕ ರೈತರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ ಹಾಗೂ ಹಾಲು ಒಕ್ಕೂಟಗಳು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎನ್.ಸತೀಶ್ ಒತ್ತಾಯಿಸಿದರು.
ಮುಖ್ಯ ಕಾರ್ಯನಿರ್ವಾಹಕ ಎನ್.ರಾಮಲಿಂಗೇಗೌಡ ಮಾತನಾಡಿ, ಬಲ್ಕ್ ಮಿಲ್ಕ್ ಕೂಲರ್ ಕೇಂದ್ರವಾಗಿರುವ ಚಿದರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2024 - 2025 ನೇ ಸಾಲಿನಲ್ಲಿ 1,16,794 ರೂಪಾಯಿಗಳ ನಿವ್ವಳ ಲಾಭ ಬಂದಿದೆ. 2025 - 2026 ನೇ ಸಾಲಿಗೆ 5,68,100 ರೂ.ಗಳ ಅಂದಾಜು ಬಜೆಟ್ ಅನ್ನು ರೂಪಿಸಲಾಗಿದ್ದು, 1.40 ಲಕ್ಷ ರೂ.ನಿವ್ವಳ ಲಾಭವನ್ನು ನಿರೀಕ್ಷಿಸಲಾಗಿದೆ. ಆಡಳಿತ ಮಂಡಳಿ ನಿರ್ದೇಶಕರ ಸಹಕಾರ ಹಾಗೂ ಹಾಲು ಉತ್ಪಾದಕ ರೈತರ ಬೆಂಬಲದಿಂದ ಸಹಕಾರ ಸಂಘ ಉತ್ತ ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಅಧಿಕ ಪ್ರಮಾಣದಲ್ಲಿ ಹಾಲನ್ನು ಸರಬರಾಜು ಮಾಡಿದ ಶಾಂತರಾಜು, ನಾಗೇಂದ್ರ ಸ್ವಾಮಿ ಹಾಗೂ ಜಯಮ್ಮ ಅವರಿಗೆ ಸಭೆಯಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು. ಹಾಲು ಉತ್ಪಾದಕರ ರೈತರು ಕೃಷಿ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿದ್ದರಿಂದ ಸಭೆಗೆ ತಡವಾಗಿ ಆಗಮಿಸಿ ಸಭಾ ನಡವಳಿ ಪುಸ್ತಕದಲ್ಲಿ ಸಹಿ ಮಾಡಿದರು.
ಜಿಲ್ಲಾ ಹಾಲು ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ಸಿ.ಅನಿತಾ, ಸಂಘದ ಉಪಾಧ್ಯಕ್ಷ ಮಹಾದೇವೇಗೌಡ, ನಿರ್ದೇಶಕರಾದ ಎಂ.ಪುಟ್ಟಸ್ವಾಮಿ, ಮಾದೇಗೌಡ, ನಂಜೇಗೌಡ, ಶಾಂತರಾಜು, ಪುಟ್ಟರಾಜು, ವೆಂಕಟೇಶ್, ಲಕ್ಷ್ಮಮ್ಮ, ಸುಂದರಮ್ಮ, ಶಿವಮ್ಮ, ಹಾಲು ಪರೀಕ್ಷಕ ಸಿ.ಎನ್.ಶಿವನಂಜು, ಸಹಾಯಕ ಶಿವನಾಗೇಗೌಡ, ರಂಗಸ್ವಾಮಿ, ಗಿರೀಶಮ್ಮ ಹಾಗೂ ಇತರರು ಇದ್ದರು.