ಸಂಶಿಯಲ್ಲಿನ ಮುಳುಗಡೆ ಮನೆಗಳಿಗೆ ಪರಿಹಾರ ನೀಡಿ

SAMSHI
Published on

ಸಂಶಿ: ಗ್ರಾಮದ ಕೆಲವು ಪ್ರದೇಶಗಳಲ್ಲಿ ಮಳೆ ಬಂದಾಗ ಬಹಳಷ್ಟು ಮನೆಗಳು ಮುಳುಗಡೆ ಆಗುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪರಿಹಾರ ದೊರಕಿಲ್ಲ ಎಂದು ಗ್ರಾಮಸ್ಥರು ಸಚಿವ ಸಂತೋಷ್ ಲಾಡ್ ಎದುರು ಅಳಲು ತೋಡಿಕೊಂಡರು.

ಶುಕ್ರವಾರ ಮಳೆಯಿಂದ ಹಾನಿಯಾದ ಪ್ರದೇಶ ವೀಕ್ಷಣೆಗೆ ಬಂದಿದ್ದ ವೇಳೆ ಸಚಿವ ಲಾಡ್ ಎದುರು ಸ್ಥಳೀಯರು ಸಮಸ್ಯೆ ತೋಡಿಕೊಂಡರು.

ಸಚಿವ ಸಂತೋಷ ಲಾಡ್ ಮಾತನಾಡಿ, ಈ ಸಮಸ್ಯೆಗೆ ಅಧಿಕಾರಿಗಳಿಂದ ತಕ್ಷಣ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿ ಈ ವರ್ಷ ಮಳೆಯಿಂದ ಹಾನಿಯಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಬೆಳೆ ರಕ್ಷ ರೈತ ಸಂಘದ ಸದಸ್ಯರು ಕುಂದಗೋಳವನ್ನು ಬರಪೀಡಿತ ತಾಲೂಕನ್ನಾಗಿ ಘೊಷಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ನಂತರ ಚಾಕಲಬ್ಬಿ ಹಾಗೂ ಸಂಶಿ ಗ್ರಾಮದ ನಡುವಿನ ಗೂಗಿಹಳ್ಳವನ್ನು ವೀಕ್ಷಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಪುಷ್ಯ ಮಳೆ ಅವಾಂತರದಿಂದ ಸಾಕಷ್ಟು ಹೊಲ- ಗದ್ದೆ, ಮನೆಗೆ ಹಾನಿಯಾದ ಪ್ರದೇಶಗಳನ್ನು ಸಚಿವ ಸಂತೋಷ ಲಾಡ್ ಅವರೊಂದಿಗೆ ಶಾಸಕ ಎಂ.ಆರ್. ಪಾಟೀಲ ವೀಕ್ಷಣೆ ಮಾಡಿದರು.

ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ. ಎಸ್. ಅಕ್ಕಿ, ಭರಮಪ್ಪ ಮುಗಳಿ, ಮುಖಂಡರಾದ, ಗೌಡಪ್ಪಗೌಡ ಪಾಟೀಲ, ಜಗನ್ನಾಥಗೌಡ ಸಿದ್ಧನಗೌಡ್ರ, ಚಂದ್ರಶೇಖರ ಜುಟ್ಟಲ, ನಾಗನಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net