ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ

19 HNL 2
Published on

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ಕರೊನಾ ವೈರಸ್ ಭೀತಿ ಮಧ್ಯೆಯೂ ಸ್ಥಳೀಯ ಪುರಸಭೆ ಕಲುಷಿತ ನೀರು ಸರಬರಾಜು ಮಾಡುತ್ತಿದ್ದು, ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೆ ತಾಲೂಕು ಆಡಳಿತದ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಹಾನಗಲ್ಲ ತಾಲೂಕು ಸ್ವಾಭಿಮಾನಿ ನಾಗರಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಒಂದೂವರೆ ತಿಂಗಳಿನಿಂದ ಶುದ್ಧೀಕರಿಸದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಸಾರ್ವಜನಿಕರು ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕರೊನಾ ಭಯದ ನಡುವೆ ಆರೋಗ್ಯ ಜಾಗೃತಿಗೆ ಆದ್ಯತೆ ನೀಡಬೇಕಾದ ಪುರಸಭೆಯೇ ಜನರ ಆರೋಗ್ಯ ನಿರ್ಲಕ್ಷಿಸುತ್ತಿರುವುದು ವಿಷಾದದ ಸಂಗತಿ. ಮುಂಜಾಗ್ರತಾ ಕ್ರಮವಾಗಿ ಸಂತೆ, ಸಭೆ-ಸಮಾರಂಭಗಳನ್ನು ರದ್ದುಪಡಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಗೌರವಾಧ್ಯಕ್ಷ ಡಾ. ಪ್ರಕಾಶಗೌಡ ಪಾಟೀಲ ಮಾತನಾಡಿ, ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಭಯವಿಲ್ಲದಂತಾಗಿದೆ. ಪುರಸಭೆ ಸದಸ್ಯರು ಅಥವಾ ಸಾರ್ವಜನಿಕರ ಸಲಹೆ-ಸೂಚನೆಗಳಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂದು ದೂರಿದರು.

ಅಧ್ಯಕ್ಷ ಸೋಮಶೇಖರ ಕೋತಂಬ್ರಿ, ತಾ.ಪಂ. ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಗಣ್ಯರಾದ ನಾಗೇಂದ್ರ ತುಮರಿಕೊಪ್ಪ, ರವೀಂದ್ರ ಚಿಕ್ಕೇರಿ, ವಿರೂಪಾಕ್ಷಯ್ಯ ಹಿರೇಮಠ, ಚನ್ನಪ್ಪ ಕೋರಿಶೆಟ್ಟರ್, ವಿನಾಯಕ ಕುರುಬರ, ರಾಜೂ ಗುಡಿ, ರಾಮೂ ಯಳ್ಳೂರ, ಎಂ.ಆರ್. ಗುತ್ತಲ, ಎನ್.ಎ. ಗಿರಸಿನಕೊಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net