ಸಾರ್ವಜನಿಕರಿಗೆ ಸವಲತ್ತು ತಲುಪಿಸಿ

30 SARAG 2
ಸರಗೂರು ತಾಲೂಕಿನ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.
Published on

ಸರಗೂರು: ಜನಸಂಪರ್ಕ ಸಭೆ ಅಂದರೆ ಬರೀ ಆಶ್ವಾಸನೆ ಸಭೆ ಆಗಬಾರದು. ಬದಲಾಗಿ ಜನರ ಕುಂದುಕೊರತೆ ನಿವಾರಣೆಯಾಗಬೇಕು. ಅಲ್ಲದೆ ಇಲಾಖೆಗಳಿಂದ ದೊರೆಯುವ ಸವಲತ್ತು ಸಾರ್ವಜನಿಕರಿಗೆ ತ್ವರಿತವಾಗಿ ದೊರೆಯಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಜನಸಂಪರ್ಕ ಸಭೆಯ ಪೂರ್ವಭಾವಿಯಾಗಿ ಶುಕ್ರವಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಹೆಚ್ಚಿನ ಫಲಿತಾಂಶ ದೊರೆಯಬೇಕು. ಸರ್ಕಾರ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ದೊರೆಯುವ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಬಿಇಒ ಅವರಿಗೆ ಶಾಸಕರು ಸೂಚಿಸಿದರು.

ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಕೆಲ ಶಿಕ್ಷಕರು ಇಲ್ಲಿ ವ್ಯಾಸಂಗ ಮಾಡಬೇಡಿ, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಂದು ಹೇಳಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಲು ಯೋಗ್ಯರಲ್ಲ. ಮಕ್ಕಳನ್ನು ಹೋಗಿ ಎನ್ನುವ ಬದಲು ಇವರೇ ಸರ್ಕಾರಿ ನೌಕರಿ ಬಿಟ್ಟು ಖಾಸಗಿ ಶಾಲೆಗೆ ಸೇರಿಕೊಳ್ಳಲಿ. ಇಂತಹ ಶಿಕ್ಷಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಇಒಗೆ ಸೂಚಿಸಿದ ಅವರು, ನೀವು ಕ್ರಮ ಕೈಗೊಳ್ಳದಿದ್ದರೆ ನಾನೇ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೆ.19ಕ್ಕೆ ಮುಂದೂಡಿಕೆ: ಸೆ.2ರಂದು ನಿಗದಿಯಾಗಿದ್ದ ಜನಸಂಪರ್ಕ ಸಭೆಯನ್ನು ಸೆ. 19ಕ್ಕೆ ಮುಂದೂಡಲಾಗಿದೆ. ಪ್ರತಿ ಇಲಾಖೆ ವತಿಯಿಂದ ವಸ್ತುಪ್ರದರ್ಶನ, ಆಯೋಜಿಸಬೇಕು, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ದೃಷ್ಟಿಯಿಂದ ಜನಸಂಪರ್ಕ ಸಭೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದರು.

ನಾವು ಜನಸಂಪರ್ಕ ಸಭೆಯನ್ನು ಒಂದು ಕಟ್ಟಡದಲ್ಲಿ ಮಾಡುವುದರಿಂದ ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ತಾಲೂಕಿನ ಜಯಚಾಮರಾಜೇಂದ್ರ ಒಡೆಯರ್ ಕ್ರೀಡಾಂಗಣದಲ್ಲಿ ದೊಡ್ಡಮಟ್ಟದಲ್ಲಿ ಜನ ಸಂಪರ್ಕ ಸಭೆ ಮಾಡಬೇಕು. ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಪ್ರತಿ ಗ್ರಾಮಕ್ಕೂ ಅಧಿಕಾರಿಗಳು ಭೇಟಿ ನೀಡಬೇಕು ಹಾಗೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಎಲ್ಲರೂ ಕೆಲಸ ಮಾಡಬೇಕಿದೆ. ಹೀಗಾಗಿ ಎಲ್ಲ ಅಧಿಕಾರಿಗಳು ನನ್ನ ಜತೆ ಕೈ ಜೋಡಿಸಬೇಕು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಳಚಿಹಾಕಬೇಕು ಎಂಬುದು ನನ್ನ  ಗುರಿಯಾಗಿದೆ ಎಂದು ತಿಳಿಸಿದರು.

ಸಭೆ ಮುಗಿದ ಮೇಲೆ ಸಾರ್ವಜನಿಕರ ಕುಂದುಕೊರತೆಗಳನ್ನು ಅರ್ಜಿಯನ್ನು ಶಾಸಕರು ಸ್ವೀಕರಿಸಿದರು. ತಹಸೀಲ್ದಾರ್ ಮೋಹನಕುಮಾರಿ, ತಾಪಂ ಇಒ ಪ್ರೇಮ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್, ಪಿಎಸ್‌ಐ ಕಿರಣ್, ಕಬಿನಿ ಜಲಾಶಯ ಕಾರ್ಯಪಾಲಕ ಇಂಜಿನಿಯರ್ ಕೆ.ಆರ್.ಉಷಾ, ಪಪಂ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ ಕುಮಾರ್, ಶಶಿಕಲಾ, ಬಿಡಬ್ಲುೃಡಿ ಅಧಿಕಾರಿ ರಮೇಶ್, ಅಬಕಾರಿ ಇಲಾಖೆ ಅಧಿಕಾರಿ ಶಿವರಾಜು, ಕೆಇಬಿ ಕಾರ್ಯಪಾಲಕ ಇಂಜಿನಿಯರ್ ಎಸ್.ರಮೇಶ್, ಮಹೇಶ್, ರಾಮಸ್ವಾಮಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net