

ತಿ.ನರಸೀಪುರ: ತಾಲೂಕಿನ ಕುಪ್ಯ ಗ್ರಾಮಕ್ಕೆ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಿ, ಬೆಂಗಳೂರು ನಗರಕ್ಕೆ ಸಂಚರಿಸುವ ಬಸ್‌ಗಳನ್ನು ಗ್ರಾಮಾಂತರಕ್ಕೂ ವಿಸ್ತರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಕುಪ್ಯ ಗ್ರಾಮದಲ್ಲಿ ಗುರುವಾರ ನವೀಕರಣಗೊಂಡಿದ್ದ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಪಂಚಾಯಿತಿ ವ್ಯಾಪ್ತಿಯ ಕಂದಾಯ-ಪೋಡಿ ಅದಾಲತ್ ಮತ್ತು ಇ-ಸ್ವತ್ತು ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.
ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನಿತ್ಯದ ಓಡಾಟಕ್ಕೆ ಈಗಿನ ಬಸ್‌ಗಳು ಸಾಲುತ್ತಿಲ್ಲ. ಹಾಗಾಗಿ ಹೆಚ್ಚಿನ ಬಸ್ ಸಂಚಾರವನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಕ್ರಮಬದ್ಧವಾಗಿ ಯೋಜನೆಯನ್ನು ರೂಪಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಸಿಡಿಮಿಡಿಗೊಂಡರು. ಪಿಂಚಣಿ ಆದೇಶ ಪತ್ರವನ್ನು ಪಡೆದುಕೊಂಡ ಬಡ ಮಹಿಳೆಯೊಬ್ಬರಿಗೆ ಪಡಿತರ ಚೀಟಿ ಕಲ್ಪಿಸಿ ಕೊಡುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕವಾಗಿ ಬಹು ಉಪಯುಕ್ತವಾದ ಡಿಜಿಟಲ್ ಗ್ರಂಥಾಲಯವನ್ನು ಗ್ರಾಮ ಪಂಚಾಯಿತಿ ಅನುದಾನದಲ್ಲಿ ನವೀಕರಣಗೊಳಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸುಸಜ್ಜಿತವಾದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು 60 ಲಕ್ಷ ರೂ.ಗಳಿಗೆ ಮೈಮುಲ್‌ನಿಂದ ಯೋಜನೆ ರೂಪಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಆರಂಭದ ಕಾಮಗಾರಿಗೆ 10 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಅಧಿಕಾರವನ್ನು ನೀಡಲು ಬೆಂಬಲ ನೀಡುತ್ತಿರುವ ಕುಪ್ಯ ಗ್ರಾಮದ ಅಭಿವೃದ್ಧಿಗೆ ಸಿಎಂ ಹಾಗೂ ನಾನು ಬದ್ಧರಾಗಿದ್ದೇವೆ. ಯಾವುದೇ ಸಮಸ್ಯೆಗಳನ್ನು ಗ್ರಾಮಸ್ಥರು ನಮ್ಮ ಗಮನಕ್ಕೆ ತಂದರೆ ಪರಿಹರಿಸಲು ಮೊದಲ ಆದ್ಯತೆಯನ್ನು ನೀಡುತ್ತೇವೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಪ್ರಭಾಕರ್ ಮಾತನಾಡಿ, ಕಿರಿದಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪ್ರತಿನಿತ್ಯ 1100 ರಿಂದ 1200 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ, ಬಿಎಂಸಿ ಕೇಂದ್ರವನ್ನು ಮಾಡಲು 60 ಲಕ್ಷ ರೂಗಳಿಗೆ ಯೋಜನೆ ರೂಪಿಸಿದ್ದೇವೆ. ಆರಂಭಿಕವಾಗಿ ವರುಣ ಶಾಸಕರಿಂದ 10 ಲಕ್ಷ ಅನುದಾನ ಮಂಜೂರಾಗಿದೆ. ಸಂಸದರು ಹಾಗೂ ಪರಿಷತ್ ಸದಸ್ಯರು ಸೇರಿದಂತೆ ಹಾಲು ಒಕ್ಕೂಟದ ನೆರವನ್ನು ಪಡೆದು ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕಿ ಭಾಗ್ಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗವಿಸಿದ್ದಯ್ಯ, ಅಭಿವೃದ್ಧಿ ಅಧಿಕಾರಿ ಗಜೇಂದ್ರ, ಮಾಜಿ ಅಧ್ಯಕ್ಷ ರಾಘು, ಜಿ.ಪಂ ಮಾಜಿ ಸದಸ್ಯ ಕೆ ಮಹದೇವ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ನಿರ್ದೇಶಕ ಎನ್.ಅನಿಲ್ ಕುಮಾರ್, ರಾಘವೇಂದ್ರ,ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ಓಂಪ್ರಕಾಶ್, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಸಂಘದ ಉಪಾಧ್ಯಕ್ಷೆ ರಾಜಮ್ಮ ಪುಟ್ಟಸ್ವಾಮಿ, ನಿರ್ದೇಶಕ ಜೆ. ಶಿವರಾಮು, ಎಸ್.ಶಿವರಾಂ, ಪುಟ್ಟಸ್ವಾಮಿ, ಚಿಕ್ಕಬಸವಯ್ಯ, ರಾಜೇಶ್, ಗೋವಿಂದರಾಜು, ಕಾರ್ಯದರ್ಶಿ ವಿಶ್ವನಾಥ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಪುರಸಭೆ ಮಾಜಿ ಅಧ್ಯಕ್ಷ ಎನ್. ಸೋಮಣ್ಣ, ಕುಪ್ಯ ಪುಟ್ಟಸ್ವಾಮಿ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಎಇಇಗಳಾದ ಪಿ.ಎನ್. ಚರಿತಾ, ಕೆ.ಶಿವರಾಜು, ಎಇ ಮಂಜುನಾಥ್, ಬಿಸಿಎಂ ವಿಸ್ತರಣಾಧಿಕಾರಿ ಎಂ.ರಾಜಣ್ಣ, ಸಿಡಿಪಿಒ ಗೋವಿಂದರಾಜು, ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ, ರಾಜಸ್ವ ನಿರೀಕ್ಷಕ ಮಹೇಂದ್ರ, ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಮೋಸಿನ್ ಖಾನ್, ವಕೀಲ ಎಂ.ಶಿವಪ್ರಸಾದ್, ಟಿ.ಎಸ್.ಪ್ರಶಾಂತ್ ಬಾಬು, ಮಸ್ರೂರ್ ಅಹಮದ್, ಸಗೀರ್ ಅಹಮದ್, ಯಡದೊರೆ ಮರಯ್ಯ, ಸಿದ್ದರಾಜು, ಬಟ್ಟಾಳಿಗೆಹುಂಡಿ ಶಿವಣ್ಣ, ಜಯರಾಮು, ಗೋವಿಂದರಾಜು ಇತರರು ಇದ್ದರು.