

ಕೂಡ್ಲಿಗಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.
ಇದನ್ನೂ ಓದಿ:ಮಕ್ಕಳ ಪ್ರತಿಭೆ ಗುರುತಿಸಲು ಚಿಗುರು ಕಾರ್ಯಕ್ರಮ
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಮೊಬೈಲ್ ಹಾಗೂ ಟಿವಿ ದಾಸರಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದನ್ನು ಮರೆತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಬಗ್ಗೆ ಕೀಳರಿಮೆ ಇಲ್ಲದೇ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ ಮಾತನಾಡಿ, ರಂಗಭೂಮಿ ತವರೂರು ಕೂಡ್ಲಿಗಿಯ ಕಲಾವಿದರು ನಾಡಿನಾದ್ಯಂತ ಕಲೆಯನ್ನು ಪ್ರಚುರ ಪಡಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಯಲ್ಲಿ ತಾಲೂಕು ಹಿಂದುಳಿದಿಲ್ಲ ಎಂದು ತೋರಿಸಿದ್ದಾರೆ. 5 ಕಲಾವಿದರು ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಜಾಗತಿಕ ಬದಲಾವಣೆಯ ಭರಾಟೆಯಲ್ಲಿ ರಂಗಭೂಮಿ ನಶಿಸಬಾರದು ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಶಾಸಕರು ಇಲ್ಲಿ ರಂಗ ತರಬೇತಿ ಶಾಲೆ ಸ್ಥಾಪಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಕಜಾಪ ಅಧ್ಯಕ್ಷ ಕೆ.ಎಂ.ವೀರೇಶ, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಕೆ.ರಾಘವೇಂದ್ರ, ಬರಹಗಾರ ಸ್ವರೂಪನಂದಾ ಕೊಟ್ಟೂರು, ಶಿಕ್ಷಕ ಗುಪ್ಪಾಲ ಕೊಟ್ರೇಶ ಇತರರಿದ್ದರು.